ಮಹಾಮಾರಿಗೆ ಬಂತು ಸಂಜೀವಿನಿ

corona lasike
Published on

ಬೀದರ್: ಕರೊನಾ ಮಹಾಮಾರಿಗೆ ಸಂಜೀವಿನಿ ಎಂದೇ ಹೇಳಲಾಗುತ್ತಿರುವ ಬಹು ನಿರೀಕ್ಷಿತ ಕೋವಿಶೀಲ್ಡ್ ಲಸಿಕೆ ಗುರುವಾರ ಬೀದರ್ ನಗರಕ್ಕೆ ಬಂದಿದೆ.ಮೊದಲ ಹಂತದಲ್ಲಿ ಜಿಲ್ಲೆಗೆ 5500 ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಯಾಗಿದ್ದು, ಕರೊನಾದಿಂದ ಕಂಗೆಟ್ಟಿರುವ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ. ಲಸಿಕೆ ವಿತರಣೆಗೆ ಶನಿವಾರ(ಜ.16ರಂದು) ಚಾಲನೆ ಸಿಗಲಿದೆ.

ಕರೊನಾಗೆ ಲಸಿಕೆ ಯಾವಾಗ ಬರುತ್ತದೆ ಎಂದು ಜಿಲ್ಲೆಯ ಜನತೆ ಕಾತರದಿಂದ ಎದುರು ನೋಡುತ್ತಿದ್ದರು. ಸಂಕ್ರಾಂತಿ ಹಬ್ಬದ ಶುಭ ದಿನದಂದೇ ಕೋವಿಶೀಲ್ಡ್ ಲಸಿಕೆ ಹೊತ್ತ ವಾಹನ ಕಲಬುರಗಿಯಿಂದ ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಆಗಮಿಸಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿ.ಜಿ.ರೆಡ್ಡಿ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳು ಲಸಿಕೆಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿ ಸ್ವಾಗತಿಸಿಕೊಂಡು ಇಲ್ಲಿನ ಕೋಲ್ಡ್ ಸ್ಟೋರೇಜ್ನಲ್ಲಿ ಸೂಕ್ತ ಭದ್ರತೆಯೊಂದಿಗೆ ಇರಿಸಲಾಗಿದೆ.

ಬೀದರ್ ನಗರದ ಬ್ರಿಮ್ಸ್, ಹುಮನಾಬಾದ್, ಔರಾದ್, ಬಸವಕಲ್ಯಾಣ, ಭಾಲ್ಕಿ ತಾಲೂಕು ಆಸ್ಪತ್ರೆ ಮತ್ತು ಆಣದೂರನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಲಸಿಕೆ ವಿತರಣೆ ನಡೆಯಲಿದೆ. ಈ 6 ಕೇಂದ್ರಗಳಲ್ಲಿ ಮೊದಲ ದಿನ ತಲಾ 100 ಹೆಲ್ತ್ ವಾರಿಯರ್ಸ್‌ ಗಳಿಗೆ ಉಚಿತವಾಗಿ ಲಸಿಕೆ ಕೊಡಲಾಗುತ್ತಿದೆ ಎಂದು ಡಾ. ವಿ.ಜಿ.ರೆಡ್ಡಿ ವಿಜಯವಾಣಿಗೆ ತಿಳಿಸಿದರು.

ಸದ್ಯಕ್ಕೆ 5500 ಡೋಸ್ ಲಸಿಕೆ ಹಾಗೂ 42 ಸಾವಿರ ಸಿರಿಂಜ್ಗಳು ಬಂದಿದ್ದು, ಎರಡನೇ ಹಂತದ ಲಸಿಕೆ ವಾರದೊಳಗೆ ಬರುವ ನಿರೀಕ್ಷೆ ಇದೆ. ಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಿಂದಲೇ ಲಸಿಕೆ ವಿತರಣೆ ನಡೆಯಲಿದೆ. ಲಸಿಕೆ ಸಂಗ್ರಹಕ್ಕೆ ಜಿಲ್ಲೆಯ 70 ಕಡೆ ಶಿಥಿಲ ಸರಪಳಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವೈದ್ಯರು, ನಸ್೯, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್, ಬ್ರಿಮ್ಸ್, ಆರೋಗ್ಯ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಒಟ್ಟು 10240 ಹೆಲ್ತ್ ವಾರಿಯರ್ಸ್ ಗಳು ಲಸಿಕೆಗಾಗಿ ಹೆಸರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ ಬೀದರ್ ತಾಲೂಕಿನಲ್ಲಿ 4734, ಭಾಲ್ಕಿ 1312, ಬಸವಕಲ್ಯಾಣ 1463, ಹುಮನಾಬಾದ್ 1487 ಹಾಗೂ ಔರಾದ್ ನಲ್ಲಿ 1240 ಆರೋಗ್ಯ ಸಿಬ್ಬಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಮಹೇಶ ಬಿರಾದಾರ, ಕಾರ್ಯಕ್ರಮ ಸಂಯೋಜಕ ಶಿವಶಂಕರ ಬೆಮಳಗಿ, ಸ್ಟೋರ್ ಮ್ಯಾನೇಜರ್ ಮಹೇಶ, ಲೋಕೇಶ ಸಲಗರ, ಗುರುನಾಥ ಇತರರಿದ್ದರು.

28 ದಿನ ನಂತರ 2ನೇ ಬಾರಿ ಲಸಿಕೆ
ಕರೊನಾ ಲಸಿಕೆಯು ಎರಡು ಬಾರಿ ತೆಗೆದುಕೊಳ್ಳಬೇಕಾಗುತ್ತದೆ. ಮೊದಲು ಲಸಿಕೆ ತೆಗೆದುಕೊಂಡು ನಂತರ 4 ವಾರದ (28ದಿನಗಳ) ಬಳಿಕ ಮತ್ತೊಮ್ಮೆ ಲಸಿಕೆ ಪಡೆದುಕೊಳ್ಳಬೇಕು. ಪ್ರಥಮ ಬಾರಿ ಕೋವಿಶೀಲ್ಡ್ ಲಸಿಕೆ ಪಡೆದರೆ ಎರಡನೇ ಹಂತದಲ್ಲಿಯೂ ಇದೇ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ನೀಡಿದ ನಂತರ ಆಯಾ ಆಸ್ಪತ್ರೆಯಲ್ಲಿ ಅರ್ಧ ಗಂಟೆ ನಿಗಾ ಘಟಕದಲ್ಲಿ ಇಡಲಾಗುತ್ತದೆ. ಇಂಜೆಕ್ಶನ್ ಮೂಲಕ ಈ ಲಸಿಕೆ ನೀಡಲಾಗುತ್ತಿದೆ.

ಎರಡನೇ ಹಂತದಲ್ಲಿ ಪೊಲೀಸ್,
ಕಂದಾಯ ಸಿಬ್ಬಂದಿಗೆ ಡೋಸ್

ಮೊದಲ ಹಂತದಲ್ಲಿ ಹೆಲ್ತ್ ವಾರಿಯರ್ಸ್‌ ಗಳಿಗೆ ಕರೊನಾ ಲಸಿಕೆ ವಿತರಿಸಲಾಗುತ್ತಿದ್ದರೆ ಎರಡನೇ ಹಂತದಲ್ಲಿ ಪೊಲೀಸ್, ಕಂದಾಯ ಹಾಗೂ ನಗರಸಭೆ ಸಿಬ್ಬಂದಿಗೆ ಲಸಿಕೆ ವಿತರಣೆಗೆ ಸರ್ಕಾರ ಸೂಚಿಸಿದೆ. ಆಯಾ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಅಂಕಿ ಅಂಶಗಳನ್ನು ಅವರವರ ಇಲಾಖೆಗಳಿಗೆ ಕಳಿಸಲಾಗಿದೆ. ಜಿಲ್ಲೆಯಲ್ಲಿ 10240 ಹೆಲ್ತ್ ವಾರಿಯಸ್೯ ಗಳ ಲಸಿಕೆ ಪೂರ್ಣಗೊಂಡ ನಂತರ ಈ ಮೂರೂ ಇಲಾಖೆಗಳ ಕರೊನಾ ವಾರಿಯಸ್೯ಗಳಿಗೆ ಲಸಿಕೆ ಸಿಗಲಿದೆ. ಇದಾದ ಬಳಿಕ ಮೂರನೇ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ. ಆದರೆ ಇದಕ್ಕೆ ಇನ್ನೂ ಒಂದು ತಿಂಗಳಾದರೂ ಬೇಕಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ 210 ರೂ. ಗಳಿಗೆ ಒಂದು ಡೋಸ್ ಲಸಿಕೆ ಸಿಗಲಿದೆ.

ಜಿಲ್ಲೆಯಲ್ಲಿವೆ 37 ಸಕ್ರಿಯ ಪ್ರಕರಣ
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಕರೊನಾರ್ಭಟ ತಗ್ಗಿದೆ. ಪಾಸಿಟಿವ್ ಬರುವ ಸಂಖ್ಯೆಯಲ್ಲಿ ಗಣನೀಯ ಕಮ್ಮಿಯಾಗಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ (ಜ.13ರ ಮಾಹಿತಿಯಂತೆ) ಕೇವಲ 37 ಸಕ್ರಿಯ ಪ್ರಕರಣಗಳಿವೆ. ಕಳೆದ ಏಪ್ರಿಲ್ 1ರಿಂದ ಜಿಲ್ಲೆಯಲ್ಲಿ ಕರೊನಾ ಅಬ್ಬರ ಶುರುವಾಗಿದೆ. ಈವರೆಗೆ ಮಹಾಮಾರಿಯು ಜಿಲ್ಲೆಯಲ್ಲಿ 172 ಜನರ ಪ್ರಾಣ ಹಿಂಡಿದೆ. ಹೈದರಾಬಾದ್, ಸೊಲ್ಲಾಪುರ ಸೇರಿದಂತೆ ವಿವಿಧೆಡೆ ಚಿಕಿತ್ಸೆಗೆ ದಾಖಲಾಗಿದ್ದವರ ಪೈಕಿ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 7319 ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಬಳಿಕ 7106 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಮುಂಚೆ ಕರೊನಾ ಪರೀಕ್ಷೆ ಮಾಡಿಕೊಂಡವರ ಒಟ್ಟು ಸಂಖ್ಯೆಯಲ್ಲಿ ಶೇ. 6-8 ಪಾಸಿಟಿವ್ ಬರುತ್ತಿದ್ದವು. ಈಗ ಈ ಪ್ರಮಾಣವು ಶೇ. 0.20-0.40 ಕ್ಕೆ ಕುಸಿದಿದೆ. ಅಂದರೆ 1 ಸಾವಿರ ಆರ್ಟಿಪಿಸಿಆರ್ ಟೆಸ್ಟ್‌ನಲ್ಲಿ 2-4ರಷ್ಟು ಪಾಸಿಟಿವ್ ಬರುತ್ತಿವೆ. ಈಗಿನ ಸ್ಥಿತಿಗತಿ ಹಾಗೂ ಕೋವಿಶೀಲ್ಡ್ ಲಸಿಕೆ ಸಹ ಬಂದಿರುವ ಕಾರಣ ಬರುವ ಒಂದೆರಡು ತಿಂಗಳಲ್ಲಿ ಜಿಲ್ಲೆಯು ಕರೊನಾಮುಕ್ತವಾಗುವ ಆಶಾಭಾವ ಮೂಡಿದೆ.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕೋವಿಶೀಲ್ಡ್ ಲಸಿಕೆ ವಿತರಣೆ ಸುವ್ಯವಸ್ಥಿತ, ಸಮರ್ಪಕವಾಗಿ ನಡೆಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಅಧಿಕಾರಿಗಳ ತಂಡ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಯಶಸ್ವಿಯಾಗಿ ತಾಲೀಮು (ಡ್ರೈ ರನ್) ಸಹ ನಡೆಸಿದೆ. ಜನರ ಆರೋಗ್ಯ ರಕ್ಷಣೆ ಕ್ರಮಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಲಸಿಕೆ ಬಗ್ಗೆ ಜನರು ಯಾವುದೇ ವದಂತಿಗೆ ಕಿವಿಗೊಡಬಾರದು. | ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ

ಸದ್ಯಕ್ಕೆ ಜಿಲ್ಲೆಗೆ 5500 ಕೋವಿಶೀಲ್ಡ್ ಲಸಿಕೆ ಬಂದಿದ್ದು, ಇನ್ನೊಂದು ವಾರದಲ್ಲಿ ಎರಡನೇ ಹಂತದ ಲಸಿಕೆ ಬರಲಿದೆ. ಕೋವಿಡ್ ಲಸಿಕೆ ಪಡೆದ ನಂತರವೂ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸಕರ್ಾರದ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ, ಸೋಂಕು ನಿವಾರಕ ದ್ರಾವಣದಿಂದ ಕೈಗಳು ಸ್ವಚ್ಛವಾಗಿಟ್ಟುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕರೊನಾ ವಿರುದ್ಧದ ಸಮರದಲ್ಲಿ ಗೆಲ್ಲುವುದಕ್ಕೆ ಜನ ಸಹಕಾರ ಮತ್ತು ಸಹಭಾಗಿತ್ವ ಮುಖ್ಯ.| ಡಾ. ವಿ.ಜಿ.ರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net