ಮಹಾಮಾರಿಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ

27 lxr 1.a
Published on

ಗದಗ: ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ್ದ 95 ವರ್ಷದ ವೃದ್ಧೆ ಶನಿವಾರ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

ರೋಣ ತಾಲೂಕಿನ ನಿಡಗುಂದಿಕೊಪ್ಪದ 95 ವರ್ಷದ ವೃದ್ಧೆ ಕಳೆದ ಗುರುವಾರ ನಗರಕ್ಕೆ ಆಗಮಿಸಿದ ಅವರಿಗೆ ಉಸಿರಾಟದ ತೊಂದರೆ ಕಂಡುಬಂದಿತ್ತು. ಹೀಗಾಗಿ ಅವರನ್ನು ನಗರದ ಜಿಮ್ಸ್​ಗೆ ದಾಖಲಿಸಿ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಶನಿವಾರ ಜಿಲ್ಲೆಯಲ್ಲಿ 24 ಹೊಸ ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 140 ಕ್ಕೆ ಏರಿದೆ.

ದೆಹಲಿಯಿಂದ ಜಿಲ್ಲೆಗೆ ಆಗಮಿಸಿದ 3 ಜನರಲ್ಲಿ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ಪಟ್ಟಣದ ವಿದ್ಯಾನಗರದ ನಿವಾಸಿಗಳಾದ 12 ವರ್ಷದ ಬಾಲಕ, 47 ವರ್ಷದ ಪುರುಷ ಹಾಗೂ 39 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಹರ್ತಿ ಗ್ರಾಮದ 40 ವರ್ಷದ ಪುರುಷನ (ಪಿ-7832) ಸಂಪರ್ಕದಿಂದ 4 ಜನರಿಗೆ ಸೋಂಕು ತಗುಲಿದೆ. ಗ್ರಾಮದ 32 ವರ್ಷದ ಮಹಿಳೆ, 82 ವರ್ಷದ ವೃದ್ಧೆ, 22 ವರ್ಷದ ಯುವತಿ ಹಾಗೂ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ 26 ವರ್ಷದ ಯುವಕನಿಗೆ ಸೋಂಕು ತಗುಲಿದೆ. ದೃಢಪಟ್ಟಿದೆ.

ಅಂತರ ಜಿಲ್ಲಾ (ಬೆಂಗಳೂರು, ಧಾರವಾಡ) ಪ್ರಯಾಣದಿಂದ ಶಿರಹಟ್ಟಿ ತಾಲೂಕಿನ ಲಕ್ಷೆ್ಮೕಶ್ವರದ 39 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಶಿರಹಟ್ಟಿ ತಾಲೂಕಿನ ಮಜ್ಜೂರು ತಾಂಡಾ ನಿವಾಸಿ 29 ವರ್ಷದ ಮಹಿಳೆಯ (ಪಿ-8723) ಸಂಪರ್ಕದಿಂದ ತಾಂಡಾದ 14 ವರ್ಷದ ಬಾಲಕಿಗೆ ಸೋಂಕು ಹರಡಿದೆ. ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ 24 ವರ್ಷದ ಮಹಿಳೆ, ಬಾಲೇಹೊಸೂರ ಗ್ರಾಮದ 26 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ. 55 ವರ್ಷದ ಪುರುಷನ (ಪಿ-8732) ಸಂಪರ್ಕದಿಂದಾಗಿ 3 ಜನರಿಗೆ ಸೋಂಕು ದೃಢಪಟ್ಟಿದೆ. ಶಿರಹಟ್ಟಿ ತಾಲೂಕಿನ ಶಿವಾಜಿನಗರದ 22 ವರ್ಷದ ಯುವತಿ, 60 ವರ್ಷದ ಪುರುಷ, ಹಾಗೂ 80 ವರ್ಷದ ವೃದ್ಧೆಗೆ ಸೋಂಕು ತಗುಲಿದೆ.

ಮಹಾರಾಷ್ಟದಿಂದ ಜಿಲ್ಲೆಗೆ ಆಗಮಿಸಿದ 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಬೆಟಗೇರಿಯ ರಾಮಕೃಷ್ಣ ಪರಮಾನಂದ ರಸ್ತೆಯ 67 ವರ್ಷದ ಪುರುಷ, 65 ವರ್ಷದ ಮಹಿಳೆ, ಜಾಕೀರ ಹುಸೇನ ಕಾಲನಿಯ 22 ವರ್ಷದ ಯುವಕ, 19 ವರ್ಷದ ಯುವಕ, ಲಕ್ಷ್ಮಣ ಚಾಳಿನ 44 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಗದಗ-ಬೆಟಗೇರಿ ನಗರದ 26 ವರ್ಷದ ಮಹಿಳೆಯ (ಪಿ-7386) ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಗಾಂಧಿನಗರದ 30 ವರ್ಷದ ಪುರುಷನಿಗೆ ವೈರಸ್ ಹರಡಿದೆ.

ಅಂತರ ಜಿಲ್ಲಾ (ಬೆಂಗಳೂರು, ಧಾರವಾಡ) ಪ್ರಯಾಣದ ಹಿನ್ನೆಲೆಯಲ್ಲಿ ಮುಂಡರಗಿಯ ನೇಕಾರನಗರದ 65 ವರ್ಷದ ಮಹಿಳೆ, ರೋಣ ತಾಲೂಕಿನ ಬೆಳವಣಕಿ ಗ್ರಾಮದ 12 ವರ್ಷದ ಬಾಲಕಿಗೆ ಸೋಂಕು ತಗುಲಿದೆ.

ಬಾಗಲಕೋಟೆ ಜಿಲ್ಲೆಯ 54 ವರ್ಷದ ಪುರುಷನ (ಪಿ-9153) ಸಂಪರ್ಕದಿಂದ ರೋಣ ತಾಲೂಕಿನ ಮೆಣಸಗಿ ಗ್ರಾಮದ 34 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರನ್ನೂ ಜಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

20 ಜನರಿಗೆ ಕ್ವಾರಂಟೈನ್

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರದ ನಿವಾಸಿ, ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ ಆಗಿದ್ದ 39 ವರ್ಷದ ವ್ಯಕ್ತಿ ಮತ್ತು ಮುಳಗುಂದ ಪಶು ಆಸ್ಪತ್ರೆಯಲ್ಲಿ ಸಹಾಯಕನಾಗಿರುವ ಬಾಲೇಹೊಸೂರಿನ ಯುವಕನಿಗೆ (26) ಕರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸೋಮೇಶ್ವರ ದೇವಸ್ಥಾನದ ಹತ್ತಿರದ ಪ್ರದೇಶ ಮತ್ತು ಬಾಲೇಹೊಸೂರಿನ ಆಂಜನೇಯಸ್ವಾಮಿ ದೇವಸ್ಥಾನ ಹತ್ತಿರದ 100 ಮೀ ವ್ಯಾಪ್ತಿಯ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಪರಿಗಣಿಸಿ ಸೀಲ್​ಡೌನ್ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಲಕ್ಷ್ಮೇಶ್ವರದ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 15 ಜನರನ್ನು ಪಟ್ಟಣದ ಸರ್ಕಾರಿ ಹಾಸ್ಟೆಲ್​ನಲ್ಲಿ ಹಾಗೂ ಬಾಲೇಹೊಸೂರಿನ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 5 ಜನರನ್ನು ಶಿಗ್ಲಿಯ ಸರ್ಕಾರಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸೀಲ್​ಡೌನ್ ಪ್ರದೇಶದಲ್ಲಿನ ಜನತೆ ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶದ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆಯವರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಲಕ್ಷ್ಮೇಶ್ವರದಲ್ಲಿ ವ್ಯಕ್ತಿಗೆ ಪಾಸಿಟಿವ್ ದೃಢಪಟ್ಟಿರುವ ಮಾಹಿತಿ ಹರಡುತ್ತಿದ್ದಂತೆಯೇ ಜನರಲ್ಲಿ ಆತಂಕ ಮನೆ ಮಾಡಿದೆ. ಪುರಸಭೆಯವರು ಮತ್ತು ಗ್ರಾಮ ಪಂಚಾಯಿತಿಯವರು ಈ ಪ್ರದೇಶದಲ್ಲಿ ಸ್ಯಾನಿಟೈಜೇಶನ್ ಮಾಡಿ ಸೀಲ್​ಡೌನ್ ಮಾಡುವ ಮೊದಲೇ ಬಹುತೇಕ ಜನರು ತಮ್ಮ ಮನೆಗಳಿಗೆ ಬೀಗ ಹಾಕಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾರೆ.

ಮಲ್ಲಸಮುದ್ರದಲ್ಲಿ ಕಂಟೇನ್ಮೆಂಟ್ ಘೊಷಣೆ

ಗದಗ: ಗದಗ ತಾಲೂಕು ಅಸುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಮುದ್ರ ಗ್ರಾಮದ ವಾರ್ಡ್ ನಂ.2 ರ ಸಿದ್ದನಗೌಡ ಪಾಟೀಲ ಲೇಔಟ್ ಭಾಗದ 100 ಮೀ. ಪ್ರದೇಶವನ್ನು ನಿಯಂತ್ರಿತ (ಕಂಟೇನ್ಮೆಂಟ್) ಪ್ರದೇಶ ಘೊಷಿಸಲಾಗಿದೆ. ಗದಗ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ದಿನೇಶ ಎಂ.ಆರ್. ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ತಾಲೂಕಿನ ಹೊಂಬಳ ಗ್ರಾಮದ ವಾರ್ಡ್ ನಂ. 4 ಬ್ರಾಹ್ಮಣ ಕಾಲನಿ ಭಾಗಗಳ 100 ಮೀಟರ್ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶ ಎಂದು ಘೊಷಿಸಲಾಗಿದೆ. ಪಿಎಂಜಿಎಸ್​ವೈ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಪ್ಪ ದಿವಟರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ ತಾಲೂಕಿನ ಯಲಿಶಿರೂರ ಗ್ರಾಪಂ ವ್ಯಾಪ್ತಿಯ ಹೊಸೂರ ಗ್ರಾಮದ ವಾರ್ಡ್ ನಂ. 1ರ ಭಾಗದ 100 ಮೀಟರ್ ಸುತ್ತಲಿನ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶ ಎಂದು ಘೊಷಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ಕಣವಿ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ 35ರ ನಂದೀಶ್ವರ ನಗರ 2ನೇ ಕ್ರಾಸ್ ಭಾಗದ 100 ಮೀಟರ್ ಸುತ್ತಲಿನ ಪ್ರದೇಶವನ್ನು ನಿಯಂತ್ರಿತ ಪ್ರದೇಶವೆಂದು ಘೊಷಿಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಬಿ. ಮರಿಗೌಡರ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ರೋಣ ತಾಲೂಕಿನ ಇಟಗಿ ಗ್ರಾಮದ ವಾರ್ಡ್ ನಂ.4ರ ಭಾಗದ 100 ಮೀಟರ್ ಸುತ್ತಲಿನ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶವೆಂದು ಘೊಷಿಸಿದ್ದು, ರೋಣ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ನಾಗನಗೌಡ ಪಾಟೀಲ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಮುಂಡರಗಿ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 15 ನೇಕಾರ ಓಣಿಯ ಭಾಗದ ಮತ್ತು ವಾರ್ಡ್ ನಂ. 21 ಅಂಬಾಭವಾನಿ ನಗರದ 100 ಮೀಟರ್ ಸುತ್ತಲಿನ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶವಾಗಿದೆ. ಮುಂರಡಗಿ ಪುರಸಭೆ ಮುಖ್ಯಾಧಿಕಾರಿ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ. ನರಗುಂದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 16, ಸಿದ್ಧನಭಾವಿ ಓಣಿಯ ಭಾಗದ 100 ಮೀಟರ್ ಸುತ್ತಲಿನ ವ್ಯಾಪ್ತಿಯನ್ನು ನಿಯಂತ್ರಿತ ಪ್ರದೇಶವೆಂದು ಘೊಷಿಸಿದ್ದು, ನರಗುಂದ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಬ್ಯಾಳಿ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net