ಮಹಾಮಾರಿ ತಡೆಗೆ ಜಿಲ್ಲಾಡಳಿತ ಸನ್ನದ್ಧ

carona logo
Published on

ಗದಗ: ಕರೊನಾ ಹೆಮ್ಮಾರಿ ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವ ಮಾ. 22ರ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿ ವ್ಯಾಪಕವಾಗುತ್ತಿರುವ ಸಾಂಕ್ರಾಮಿಕ ರೋಗಕ್ಕೆ ಬ್ರೇಕ್ ಹಾಕಲು ಪ್ರಧಾನಿ ಅವರೊಂದಿಗೆ ಕೈಜೋಡಿಸಲು ಜಿಲ್ಲೆಯ ಜನರು ಸನ್ನದ್ಧರಾಗಿದ್ದಾರೆ.

ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಸ್ವಯಂಪ್ರೇರಿತರಾಗಿ ಎಲ್ಲ ವಹಿವಾಟು ಬಂದ್ ಮಾಡಲು ಮುಂದಾಗಿದ್ದಾರೆ. ಆದರೆ, ಅಗತ್ಯ ವಸ್ತುಗಳಾದ ಹಾಲು, ಔಷಧ ಮಳಿಗೆ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿರುತ್ತವೆ. ಆಸ್ಪತ್ರೆ, ಅಗ್ನಿಶಾಮಕ ದಳಗಳು ಕಾರ್ಯನಿರ್ವಹಿಸುತ್ತವೆ. ತರಕಾರಿ, ಹಣ್ಣು ಸೇರಿ ಬಹುತೇಕ ಅಂಗಡಿ ಮುಂಗಟ್ಟು ಮುಚ್ಚಿರುತ್ತವೆ. ಸಾರಿಗೆ ಬಸ್ ಸಂಚಾರ ಬಂದ್ ಆಗಿರುತ್ತದೆ.

ಜಿಲ್ಲೆಯ ಏಳು ಬಸ್ ಡಿಪೋಗಳ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸಂಚಾರ ಆರಂಭಿಸಲಾಗುವುದು. ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ರಜೆ ನೀಡಲಾಗಿದೆ. ತುರ್ತು ಸ್ಥಿತಿ ಇದ್ದಲ್ಲಿ ಮಾತ್ರ ಕೆಲಸಕ್ಕೆ ಬರಬೇಕು ಎಂದು ಆದೇಶಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಫ್.ಸಿ. ಹಿರೇಮಠ ತಿಳಿಸಿದ್ದಾರೆ.

ಹೊಸ ಪ್ರಕರಣಗಳು ದಾಖಲಾಗಿಲ್ಲ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ.

ಜಿಲ್ಲೆಗೆ ಸಂಬಂಧಿಸಿದ 17 ಸೋಂಕಿತ ಶಂಕೆಯ ಪ್ರಕರಣಗಳ ಪೈಕಿ 16 ಪ್ರಕರಣಗಳ ವೈದ್ಯಕೀಯ ವರದಿಗಳು ನೆಗೆಟಿವ್ ಬಂದಿವೆ. ಶುಕ್ರವಾರ ರಾತ್ರಿ ಜ್ವರ, ಕೆಮ್ಮು ನೆಗಡಿಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಸ್ ಕಂಡಕ್ಟರ್ ಹಾಗೂ ಮತ್ತೊಬ್ಬ ವ್ಯಕ್ತಿಯ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.

ಸದ್ಯ ಜಿಲ್ಲೆಯಲ್ಲಿ 104 ಜನರು ಆರೋಗ್ಯ ಪರೀಕ್ಷೆಗಾಗಿ ನಿಗಾದಲ್ಲಿದ್ದಾರೆ. ಇದರಲ್ಲಿ 10 ಜನರು 28 ದಿನಗಳನ್ನು ಪೂರೈಸಿ ಆರೋಗ್ಯದಿಂದ ಇದ್ದಾರೆ. ಮನೆಯಲ್ಲಿಯೇ 89 ಜನರು ಪ್ರತ್ಯೇಕವಾಗಿ ಆರೋಗ್ಯ ತಪಾಸಣೆಯ ನಿಗಾದಲ್ಲಿ ಇರಿಸಲಾಗಿದೆ. ಒಟ್ಟು ಪರೀಕ್ಷೆಗಾಗಿ 17 ಮಂದಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇದರಲ್ಲಿ 16 ಪ್ರಕರಣಗಳು ನೆಗೆಟಿವ್ ವರದಿ ಬಂದಿದೆ. ಒಂದು ಪ್ರಕರಣದ ವೈದ್ಯಕೀಯ ವರದಿ ಬರಬೇಕಿದೆ. ಕರೊನಾ ವೈರಸ್ ದೃಢಪಟ್ಟ ಪ್ರಕರಣಗಳು ಜಿಲ್ಲೆಯಲ್ಲಿ ಇಲ್ಲ ಎಂಬುದು ಸಮಾಧಾನಕರ ವಿಷಯವಾಗಿದೆ.

ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ: ಕರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾ. 22ರಂದು ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸುವುದು ವಾಕರಸಾ ಸಂಸ್ಥೆಯ ಜವಾಬ್ದಾರಿಯಾಗಿದೆ. ಭಾನುವಾರ ಅಗತ್ಯವಿದ್ದಲ್ಲಿ ಮಾತ್ರ ಬೆಳಗ್ಗೆಯಿಂದ ರಾತ್ರಿ 9 ಗಂಟೆವರೆಗೆ ಕನಿಷ್ಠ ಮಟ್ಟದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಅಲ್ಲದೆ, ಭಾನುವಾರ ರಾತ್ರಿ 9 ಗಂಟೆಯ ನಂತರ ರಾತ್ರಿ ಸಾರಿಗೆ ಸೇವೆಗಳಲ್ಲಿ ಮುಂಗಡ ಕಾಯ್ದಿರಿಸಿದಲ್ಲಿ ಮಾತ್ರ ಕಾರ್ಯಾಚರಣೆ ಮಾಡುವುದು ಅಥವಾ ಜನಸಂದಣಿ ಇದ್ದಲ್ಲಿ ಮಾತ್ರ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಹೋಟೆಲ್​ಗಳು ಬಂದ್: ಗದಗ ಜಿಲ್ಲೆಯ ಎಲ್ಲ ಹೋಟೆಲ್​ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಜನತಾ ಕರ್ಫ್ಯೂ ಯಶಸ್ವಿಗೊಳಿಸಲಾಗುವುದು ಎಂದು ಗದಗ ಬೆಟಗೇರಿ ನಗರದ ಹೋಟೆಲ್ ಒಡೆಯರ ಸಂಘದ ಕಾರ್ಯದರ್ಶಿ ಡಾ.ಕಾವೆಂಶ್ರೀ ತಿಳಿಸಿದ್ದಾರೆ.

ಕರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದರಲ್ಲಿ ಎಲ್ಲರೂ ಸ್ವಯಂ ಘೋಷಿತವಾಗಿ ಭಾಗವಹಿಸಿ ಬೆಂಬಲಿಸಿ ಯಶಸ್ವಿಗೊಳಿಸಬೇಕು. ಇದರೊಂದಿಗೆ ಕರೊನಾ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲು ಕೈಜೋಡಿಸಬೇಕು. |ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

ನಾಗರಿಕ ಧರ್ಮ ಪಾಲಿಸಿ: ಜನತಾ ಕರ್ಫ್ಯೂವನ್ನು ಎಲ್ಲರೂ ಬೆಂಬಲಿಸಿ ಪಾಲಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಮನವಿ ಮಾಡಿದ್ದಾರೆ. ಸುರಕ್ಷತೆಗಾಗಿ ಮನೆಯಲ್ಲಿಯೇ ಉಳಿಯಬೇಕು. ಹೆಚ್ಚು ಜಾಗರೂಕತೆ, ಜವಾಬ್ದಾರಿಯುತ ನಡೆ ಅವಶ್ಯಕ. ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸಿದ ಇಟಲಿ, ಸ್ಪೇನ್, ಫ್ರಾನ್ಸ್, ಸ್ವಿಟ್ಜರ್​ಲ್ಯಾಂಡ್ ಸೇರಿ ಹತ್ತಾರು ಯೂರೋಪಿಯನ್ ದೇಶಗಳಲ್ಲಿ ಕರೊನಾ ರುದ್ರನರ್ತನ ನಡೆಸಿದೆ. ಇದರಿಂದಾಗಿ ನಾವು ಪಾಠ ಕಲಿಯಬೇಕು. ಅವರು ಮಾಡಿದ ತಪ್ಪನ್ನು ನಾವು ಮಾಡಬಾರದು. ಜನಸಾಂದ್ರತೆ ಹಾಗೂ ಸಾರ್ವಜನಿಕ ನೈರ್ಮಲ್ಯದ ದೃಷ್ಟಿಯಿಂದ ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿರುವ ದೇಶಗಳಲ್ಲಿ ಅಲಕ್ಷ್ಯವೇ ಅಪಾಯಕ್ಕೆ ಆಹ್ವಾನ ನೀಡಿತು. ಕರೊನಾದ ಬಗ್ಗೆ ಅಲಕ್ಷ್ಯ, ಅಸಡ್ಡೆ ತೋರಿದರೆ ಉಂಟಾಗಬಹುದಾದ ಅಪಾಯ ಊಹಿಸಲಿಕ್ಕಾಗದು. ವಯಸ್ಸಾದ ಹಿರಿಯರ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಪ್ರತ್ಯೇಕವಾಗಿರುವುದನ್ನು ರೂಡಿಸಿಕೊಳ್ಳಬೇಕು. ಕರೊನಾ ತಡೆಗೆ ಮನೆ, ಸುತ್ತಲಿನ ಪರಿಸರ ಹಾಗೂ ಸ್ವಯಂಸ್ವಚ್ಛತೆಗೆ ಆದ್ಯತೆ ನೀಡುವ ಜೀವನ ಶೈಲಿ ಅಳವಡಿಸಿಕೊಳ್ಳಬೇಕಾಗಿದೆ. ಕರೊನಾ ಸಾರ್ವತ್ರಿಕವಾಗಿ ಹರಡದಂತೆ ಪ್ರತಿಯೊಬ್ಬರು ಜವಾಬ್ದಾರಿ ನಿರ್ವಹಿಸಲು ದೃಢ ಸಂಕಲ್ಪ ಮಾಡಿ ಅದನ್ನು ಪಾಲಿಸಬೇಕು. ಮೂಢನಂಬಿಕೆಗಳಿಂದ ಮುಕ್ತರಾಗುವುದರ ಜತೆಗೆ ಸುಳ್ಳು ಸುದ್ದಿಗಳನ್ನು ನಂಬಬಾರದು, ಹರಡಬಾರದು. ಜವಾಬ್ದಾರಿಯುತ ನಾಗರಿಕರಾಗಿ, ನಾಗರಿಕ ಧರ್ಮ ಪಾಲಿಸಬೇಕು. ರೋಗ ಹರಡುವುದನ್ನು ತಡೆಯಲು ಕೈಗೊಳ್ಳುವ ಎಲ್ಲ ಪ್ರಯತ್ನಗಳನ್ನು ನಮ್ಮ ಕರ್ತವ್ಯವೆಂದು ಹಾಗೂ ರಾಷ್ಟ್ರಸೇವೆ ಎಂದು ಭಾವಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net