ಮಹಾಮಾರಿ ಅಬ್ಬರಕ್ಕೆ ಬೆಚ್ಚಿದ ಜನ

30ankola2a
Published on

ವಿಜಯವಾಣಿ ಟೀಮ್ ಉತ್ತರ ಕನ್ನಡ

ಒಂದೇ ದಿನ 40 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಮಂಗಳೂರು ಹಾಗೂ ಮುಂಬೈನಿಂದ ವಾಪಸಾದವರಿಂದ ಹೆಚ್ಚಿನ ಜನರಿಗೆ ಸೋಂಕು ತಗಲಿದೆ.

ಮಂಗಳವಾರದ ವರದಿಯಂತೆ ಭಟ್ಕಳದಲ್ಲಿ 21, ಅಂಕೋಲಾದಲ್ಲಿ 5, ಕುಮಟಾ, ದಾಂಡೇಲಿ, ಹಳಿಯಾಳದಲ್ಲಿ ತಲಾ 4 ಹಾಗೂ ಮುಂಡಗೋಡಿನ ಇಬ್ಬರಿಗೆ ಕೋವಿಡ್-19 ದೃಢಪಟ್ಟಿದೆ.

ಇಬ್ಬರಿಂದ 20 ಜನರಿಗೆ: ಭಟ್ಕಳದಲ್ಲಿ ಮಂಗಳೂರಿನ ಆಸ್ಪತ್ರೆಗೆ ಹೋಗಿ ಬಂದ ಇಬ್ಬರಿಂದ 20 ಜನರಿಗೆ ಸೋಂಕು ಹರಡಿದೆ. ರೋಗಿ ಪಿ-13314 ರಿಂದ 1 ವರ್ಷದ ಬಾಲಕಿ ಸೇರಿ 12 ಜನರಿಗೆ ಸೋಂಕು ಹರಡಿದೆ. ಇನ್ನೊಬ್ಬ ವೃದ್ಧ ಪಿ-12047 ರಿಂದ 8 ಜನರಿಗೆ ಸೋಂಕು ಹರಡಿದೆ. ಇಬ್ಬರೂ ವೃದ್ಧರು ತೀವ್ರ ಅನಾರೋಗ್ಯ ಕಾರಣದಿಂದ ಮಂಗಳೂರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದರು. ಸದ್ಯ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು ಮಂಗಳೂರು ಬಂದರು ಪ್ರದೇಶಕ್ಕೆ ಹೋಗಿ ಬಂದ ಮುರ್ಡೆಶ್ವರ ಮಾವಳ್ಳಿಯ 39 ವರ್ಷದ ವ್ಯಕ್ತಿಗೂ ಕರೊನಾ ದೃಢಪಟ್ಟಿದೆ. ಒಟ್ಟಾರೆ ಭಟ್ಕಳದಲ್ಲಿ ಒಂದೇ ದಿನ 21 ಜನರಿಗೆ ಸೋಂಕು ಖಚಿತವಾಗಿದೆ.

ಊರಿಗೆಲ್ಲ ಸೋಂಕು: ಮಂಗಳೂರು ಬಂದರು ಪ್ರದೇಶಕ್ಕೆ ಹೋಗಿ ಬಂದ ಅಂಕೋಲಾ ಅಗ್ರಗೋಣದ ಶೆಡಿಕಟ್ಟಾ ಗ್ರಾಮದ 50 ವರ್ಷದ ವ್ಯಕ್ತಿಯಿಂದ ಇದುವರೆಗೆ ಏಳು ಜನರಿಗೆ ಸೋಂಕು ತಗಲಿದೆ. ಆತನ ಪತ್ನಿ ಹಾಗೂ ಮಗಳಿಗೆ ಎರಡು ದಿನದ ಹಿಂದೆ ಕರೊನಾ ದೃಢಪಟ್ಟಿತ್ತು. ಅವರ ಸಂಪರ್ಕಕ್ಕೆ ಬಂದ ಒಟ್ಟು 117 ಜನರ ಗಂಟಲ ದ್ರವದ ಮಾದರಿ ಪಡೆಯಲಾಗಿತ್ತು. ಅವರಲ್ಲಿ ಗ್ರಾಮದ 72 ಹಾಗೂ 65 ವರ್ಷದ ವೃದ್ಧರೂ ಸೇರಿ ಐವರಿಗೆ ಕಾಯಿಲೆ ಇರುವುದು ಕಂಡುಬಂದಿದೆ. ಇನ್ನೂ 10 ಜನರ ಪ್ರಯೋಗಾಲಯ ವರದಿ ಬರುವುದು ಬಾಕಿ ಇದೆ. ಸೋಂಕಿತರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯ ಕೋವಿಡ್-19 ವಾರ್ಡ್​ಗೆ ಸಾಗಿಸಲಾಗಿದೆ.

ಕಾಲನಿಯಲ್ಲಿ ಮುಂದುವರಿದ ಸೋಂಕು: ಮುಂಡಗೋಡಿನ ಟಿಬೇಟಿಯನ್ ಕಾಲನಿಯ ಕ್ಯಾಂಪ್ ನಂಬರ್ 2ರ ಟಿಸಿವಿ ಹಾಸ್ಟೆಲ್ ಕ್ವಾರಂಟೈನ್​ನಲ್ಲಿದ್ದ 12 ವರ್ಷದ ಬಾಲಕ, ಎಸ್​ಟಿಎಸ್​ಎಂ ಮಹಿಳಾ ಹಾಸ್ಟೆಲ್​ನಲ್ಲಿದ್ದ 17 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಇಬ್ಬರೂ ದೆಹಲಿಯಿಂದ ಬಂದ ಬೌದ್ಧ ಬಿಕ್ಕು ಯುಕೆ-117 ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಮುಂಬೈ ನಂಟು: ಮಹಾರಾಷ್ಟ್ರದಿಂದ ಮರಳಿದ ಹಳಿಯಾಳ, ಕುಮಟಾದ ತಲಾ ನಾಲ್ವರಿಗೆ ಮಹಾಮಾರಿ ವಕ್ಕರಿಸಿದೆ.

ಪುಣೆಯಿಂದ ಮರಳಿದ ಹಳಿಯಾಳ ಕೆಎಚ್​ಬಿ ಕಾಲನಿಯ ದಂಪತಿಗೆ, ಹಾಗೂ ಮುರ್ಕವಾಡದ ತಾಯಿ ಮಗನಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರು ನೆಲೆಸಿದ ಕೆಎಚ್​ಬಿ ಬಡಾವಣೆಯನ್ನು ಸಿಲ್​ಡೌನ್ ಮಾಡಲಾಗಿದೆ. ಕಾರವಾರ ಎಸಿ ಪ್ರಿಯಾಂಗಾ ಹಳಿಯಾಳಕ್ಕೆ ಭೇಟಿ ನೀಡಿದರು. ಮಹಾರಾಷ್ಟ್ರದಿಂದ ವಾಪಸಾದ ಕುಮಟಾದ ಮೊರಬಾದ 7 ವರ್ಷದ ಬಾಲಕ, ಗೋಕರ್ಣ ಹೊಸ್ಕಟ್ಟಾದ 27 ವರ್ಷದ ಮಹಿಳೆ, ಐಗಳ ಕುರ್ವೆಯ 35 ವರ್ಷದ ಮಹಿಳೆ, ಅಗ್ರಗೋಣ ಶೇಡಿಕಟ್ಟಾದ 49 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಮಹಾರಾಷ್ಟ್ರ ಮೀರಜ್​ನಿಂದ ಆಗಮಿಸಿದ ದಾಂಡೇಲಿ 3ನೇ ನಂಬರ್ ಗೇಟ್​ನ 21 ವರ್ಷದ ಮಹಿಳೆ, 2 ವರ್ಷದ ಹೆಣ್ಣು ಮಗು, ಆಂಧ್ರದಿಂದ ವಾಪಸಾದ ಗಣೇಶನಗರದ 48 ವರ್ಷದ ಪುರುಷ, ಗುಜರಾತ್​ನಿಂದ ವಾಪಸಾದ ಡಿಆರ್​ಟಿ ನಿವಾಸಿ 51 ವರ್ಷದ ಮಹಿಳೆಗೆ ರೋಗ ಖಚಿತವಾಗಿದೆ.

ಏಳು ಜನರ ಬಿಡುಗಡೆ :ಕೋವಿಡ್-19 ನಿಂದ ಗುಣ ಹೊಂದಿದ ಎರಡು ವರ್ಷದ ಮಗು ಸೇರಿ ಏಳು ಜನರನ್ನು ಮಂಗಳವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮುಂಡಗೋಡಿನ ಮೂವರು, ಹೊನ್ನಾವರದ ಇಬ್ಬರು, ಕುಮಟಾ ಹಾಗೂ ಭಟ್ಕಳದ ತಲಾ ಒಬ್ಬರಿಗೆ ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ ಪ್ರಮಾಣಪತ್ರ ನೀಡಿ ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net