

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಜಿಲ್ಲಾಡಳಿತ, ವಿವಿಧ ಸಂಘ, ಸಂಸ್ಥೆಗಳಿಂದ ಆಯೋಜಿಸುವ ಮೂಲಕ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಲಾಯಿತು.
ಪುರಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಜೈಭೀಮ್ ಜನಸ್ಪಂದನಾ ವೇದಿಕೆ ವತಿಯಿಂದ ಎಫ್‌ಟಿಎಸ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಚೇತನ್ ಕಾಂತರಾಜು, ಉಪಾಧ್ಯಕ್ಷ ಶೇಖರ್, ಮುಖಂಡರಾದ ಹರೀಶ್, ಶ್ರೀಕಾಂತ್, ಪ್ರತಾಪ್, ಪವಿತ್ರಾ ಕುಮಾರ್, ರಾಕೇಶ್, ಸಾಗರ್ ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಸಂವಿಧಾನದ ಆಶಯಗಳಿಗೆ ಪೂರಕವಾದ ರಾಜಕೀಯ ಪಕ್ಷಗಳಿಂದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಯಾವುದೇ ಒಂದು ದೇಶದಲ್ಲಿ ಬಹು ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿ ಇದ್ದರೆ ದೇಶದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗುತ್ತದೆ. ಭಾರತದಲ್ಲಿ ಹಲವಾರು ರಾಜಕೀಯ ಪಕ್ಷಗಳಿದ್ದು, ಇಂತಹ ಸಣ್ಣ ಸಣ್ಣ ಪಕ್ಷಗಳಿಂದ ಕೋಮುವಾದವು ಲಾಭ ಮಾಡಿಕೊಂಡು ತನ್ನ ಪ್ರಾಬಲ್ಯ ಸಾಧಿಸಿಕೊಳ್ಳುತ್ತಿದೆ. ಆರ್‌ಎಸ್‌ಎಸ್ ಮತ್ತು ಅದರ ಪೋಷಿತ ಬಿಜೆಪಿ ದೇಶದ ಮೂಲ ಬಹುತ್ವ ಆಶಯಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಸಂವಿಧಾನದಲ್ಲಿ ಜಾತ್ಯತೀತತೆ, ಸಮಾನತೆ, ಭ್ರಾತೃತ್ವ ಮತ್ತು ಸಮಾಜವಾದಿ ಚಿಂತನೆಯೇ ಮೂಲ ಆಧಾರವಾಗಿದೆ. ಇಂತಹ ಮಹಾ ಸಂದೇಶವಿರುವ ಸಂವಿಧಾನವನ್ನು ಹಂತ ಹಂತವಾಗಿ ನಾಶ ಮಾಡಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಮರಿಗೌಡ, ಮಾಜಿ ಮೇಯರ್‌ಗಳಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಎಂ.ಶಿವಣ್ಣ, ಪ್ರೊ. ರಾಮಪ್ಪ, ಭಾಸ್ಕರ್‌ಗೌಡ, ಗಿರೀಶ್, ಅಶೋಕ್, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಅಶೋಕಪುರಂ ಭಾಸ್ಕರ್, ಹುಣಸೂರು ಬಸವಣ್ಣ, ಶ್ಯಾಮ್‌ಯೋಗೇಶ್, ಚಂದ್ರು ಹಾಜರಿದ್ದರು.