

ಬೇಲೂರು: ಭೀಮಾ ಕೋರೆಂಗಾವ್ ಶೌರ್ಯ ದಿನದ ಅಂಗವಾಗಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಒಕ್ಕೂಟದಿಂದ ಪಟ್ಟಣದ ನೆಹರು ನಗರದಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಕಾರ್ಯಕರ್ತರು, ಅಂಬೇಡ್ಕರ್ ನಗರದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಕೋರೇಗಾವ್ ವಿಜಯ ಸ್ಥಂಬಕ್ಕೆ ಸಮೀಪ ತೆರಳಿ ಗೌರವ ಸಲ್ಲಿಸಿದರು.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ಜನವರಿ 1-1818 ರಂದು ಭೀಮಾ ಕೋರೆಗಾವ್‌ನಲ್ಲಿ ಮಹರ್ ವೀರಯೋಧರು ಶೋಷಿತರ ವಿಮೋಚನೆಗಾಗಿ ತಮ್ಮ ಪ್ರಾಣತ್ಯಾಗ ಮಾಡಿ ಅಸ್ಪೃಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನ. ಆದ್ದರಿಂದ ಈ ಮಹಾನ್ ವೀರ ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನೂರಾರು ಅಂಬೇಡ್ಕರ್ ಅಭಿಮಾನಿಗಳ ನೇತೃತ್ವದಲ್ಲಿ ಮೂಡಿ ಬಂದ ಭೀಮಾ ಕೋರೆಂಗಾವ್ ವಿಜಯೋತ್ಸವ ನೋಡಲು ಸಂತೋಷವಾಗುತ್ತಿದೆ. ಈ ವಿಜಯೋತ್ಸವವನ್ನು ತಾಲೂಕಿನ ಪ್ರತಿಯೊಬ್ಬರೂ ಸೇರಿ ಆಚರಿಸಬೇಕು. ಅಲ್ಲದೆ ಬಿಜೆಪಿ ಸರ್ಕಾರದ ಕೆಲವರು ಸಂವಿದಾನದ ಬಗ್ಗೆ ಅಪಸ್ವರದ ಮಾತುಗಳನ್ನಾಡುತ್ತಿರುವ ಸಮುದಾಯಕ್ಕೆ ಬೇಸರ ತರಿಸಿದೆ. ನಮಗೆ ಸಂವಿದಾನ ಸಂರಕ್ಷಿಸಿ ಅಂಬೇಡ್ಕರ್ ಸಿದ್ದಾಂತವನ್ನು ಒಪ್ಪುವ ಮನಸ್ಥಿತಿ ಸರ್ಕಾರಗಳು ಬರಬೇಕಿದೆ. ಇಂದು ಮುಸ್ಲಿಂ ಭಾಂದವರು ಆಗಮಿಸಿರುವುದು ಸಂತೋಷವಾಗಿದೆ ಎಂದರು.
ದಲಿತ ಮುಖಂಡ ಬಾಬು ಮಾತನಾಡಿ, ಬೇಲೂರು ಕ್ಷೇತ್ರದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಒಟ್ಟಾದರೆ ವಿಧಾನಸಭಾ ಸದಸ್ಯರನ್ನು ಸೃಷ್ಟಿಸಬಹುದು. ಕೇವಲ ಭಾಷಣ ಮಾಡಿದರೆ ಸಾಲದು ರಾಜಕೀಯ ಸ್ಥಾನಮಾನ ಅಗತ್ಯವಿದೆ ಎಂದರು.
ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಗೋವಿನಹಳ್ಳಿ ರವಿ, ಬೆಂಗಳೂರಿನ ಎ.ಜಿ,ಖಾನ್, ಬಂಟೇನಹಳ್ಳಿ ಇಸ್ಮಾಯಿಲ್, ಲಕ್ಷ್ಮಣ್, ಆಶೋಕ್, ರವೀಶ್, ನೂರ್‌ಅಹಮದ್, ಶಶಿಧರ್, ಯೋಗೀಶ್, ವೆಂಕಟೇಶ್, ರಾಯಪುರ ರವಿ, ಮಧು, ಮಂಜುನಾಥ್, ಹನುಮಂತ, ಗಿರೀಶ್, ಹರೀಶ್, ನಾಗರಾಜು ಸೇರಿದಂತೆ ಇತರರಿದ್ದರು.