ಮಹಾನಗರ ಪಾಲಿಕೆ ಗದ್ದುಗೆ ಏರಲು ಪಕ್ಷಗಳ ತಂತ್ರ-ಪ್ರತಿತಂತ್ರ

Published on

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ತನ್ನ ಹುರಿಯಾಳುಗಳನ್ನು ಅಂತಿಮಗೊಳಿಸಿದ್ದು, ಚುನಾವಣಾ ಕಣ ರಂಗೇರಿದೆ. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಧಿಕಾರದ ಗದ್ದುಗೆ ಹಿಡಿಯಲು ಮೂವರೂ ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಕಾಂಗ್ರೆಸ್ ಮುಖಂಡರು ಪಾಲಿಕೆಯ 50 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಬಿಜೆಪಿಯವರು 45ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಹೇಳುತ್ತಿದ್ದಾರೆ. ಇತ್ತ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯೂ 40 ಸ್ಥಾನಗಳಲ್ಲಿ ಗೆಲ್ಲುವುದಾಗಿ ದೃಢವಾಗಿ ಹೇಳುತ್ತಿದೆ. ಹೀಗಾಗಿ ಚುನಾವಣಾ ಕಣ ಕಾವೇರಿದೆ. ಜತೆಗೆ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ತನ್ನ ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿರುವುದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.

ಅಭಿವೃದ್ಧಿ ಮುಂದಿಟ್ಟು ಮತಯಾಚನೆ: ಬಿಜೆಪಿ ತಾನು ಕೈಗೊಂಡ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತದಾರರ ಬಳಿ ಹೋಗಲು ಸಿದ್ಧತೆ ನಡೆಸಿದ್ದು, ಹೆಚ್ಚು ಸ್ಥಾನ ಗೆಲ್ಲಲು ತಂತ್ರ ಹೆಣೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವಂತೆ ಕಾರ್ಯಕರ್ತರಿಗೆ ಮುಖಂಡರು ಸೂಚಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಿಸಿದರೆ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ಆಗುತ್ತವೆ ಎನ್ನುವುದನ್ನು ಜನರಿಗೆ ತಿಳಿಸುವಂತೆ ಮುಖಂಡರು ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಬೆಲೆ ಏರಿಕೆ ಅಸ್ತ್ರ: ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ, ಕೃಷಿ ಕಾಯ್ದೆಗಳು ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ. ‘ಪ್ರಸ್ತುತ ಸರ್ಕಾರಗಳ ಕಾಯ್ದೆಗಳು ಬಡವರು, ರೈತರ ಮೇಲೆ ಪರಿಣಾಮ ಬೀರಿವೆ. ಹೀಗಾಗಿ, ಅಭಿವೃದ್ಧಿಗೆ ಕಾಂಗ್ರೆಸ್‌ಗೆ ಮತ ನೀಡುವಂತೆ ನಮ್ಮ ಕಾರ್ಯಕರ್ತರು ಮತದಾರರ ಬಳಿ ಹೋಗಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ಆಪ್ ಕಣಕ್ಕೆ: ಆಮ್ ಆದ್ಮಿ ಪಕ್ಷವೂ ‘ದಿಲ್ಲಿ ಬದಲಾಗಿದೆ, ಬೆಳಗಾವಿಯೂ ಬದಲಾಗಲಿದೆ’ ಎಂಬ ಘೋಷಣೆ ಯೊಂದಿಗೆ ಮತ ಬೇಟೆಗೆ ತಯಾರಿ ನಡೆಸಿದೆ. ಜೆಡಿಎಸ್ ಸಹ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳುತ್ತಿದೆ. ಆದರೆ, ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು ಆ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಚಟುವಟಿಕೆ ಕಂಡು ಬರುತ್ತಿಲ್ಲ.

ಬಿಜೆಪಿ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಳಗಾವಿ ಉತ್ತರ ಮತಕ್ಷೇತ್ರ: ವಾರ್ಡ್ ನಂ. 1 ಉಷಾ ಚವ್ಹಾಣ, ವಾರ್ಡ್ ನಂ. 6 ಸಂತೋಷ ಪೆಡ್ನೇಕರ್, ವಾರ್ಡ್ ನಂ. 13 ನಾಗವೇಣಿ ಶಿಂಧೆ, ವಾರ್ಡ್ ನಂ. 14 ನಿಖಿಲ್ ಮುರ್ಕಟೆ, ವಾರ್ಡ್ ನಂ. 20 ಲತಾ ಪಾಟೀಲ, ವಾರ್ಡ್ ನಂ. 26 ರೇಖಾ ಹೂಗಾರ, ವಾರ್ಡ್ ನಂ. 31 ವೀಣಾ ವಿಜಯಪುರೆ, ವಾರ್ಡ್ ನಂ. 35 ಲಕ್ಷ್ಮೀ ರಾಥೋಡ, ವಾರ್ಡ್ ನಂ. 36 ರಣಜಿತ್ ಕಲಾಲ್, ವಾರ್ಡ್ ನಂ. 45 ರೂಪಾ ಚಿಕ್ಕಲದಿನ್ನಿ, ವಾರ್ಡ್ ನಂ. 48 ಡಾ. ಭೂಪಾಲ್ ಅಲಕನೂರೆ, ವಾರ್ಡ್ ನಂ. 55 ಸವಿತಾ ಪಾಟೀಲ.

ಬೆಳಗಾವಿ ದಕ್ಷಿಣ ಮತಕ್ಷೇತ್ರ: ವಾರ್ಡ್ ನಂ. 15 ನೇತ್ರಾವತಿ ಭಗವತ, ವಾರ್ಡ್ ನಂ. 22 ರವಿ ಸಾಂಬ್ರೇಕರ, ವಾರ್ಡ್ ನಂ. 23 ಜಯಂತ ಜಾಧವ, ವಾರ್ಡ್ ನಂ. 27 ಸಂದೀಪ ಜಾಧವ, ವಾರ್ಡ್ ನಂ. 29 ನಿತಿನ್ ಜಾಧವ, ವಾರ್ಡ್ ನಂ. 41 ಮಂಗೇಶ್ ಪವಾರ, ವಾರ್ಡ್ ನಂ. 50 ಸಾರಿಕಾ ಪಾಟೀಲ, ವಾರ್ಡ್ ನಂ. 51 ಶ್ರೀಶೈಲ ಕಾಂಬಳೆ, ವಾರ್ಡ್ ನಂ. 58 ಪ್ರಿಯಾ ಸಾತಗೌಡರ.

ತಡರಾತ್ರಿ ವರೆಗೂ ಆಯ್ಕೆ ಕಸರತ್ತು

ಕಾಂಗ್ರೆಸ್-ಬಿಜೆಪಿ ಪಕ್ಷಗಳು ಭಾನುವಾರ ಮಧ್ಯಾಹ್ನದ ಒಳಗೆ ಸ್ಪರ್ಧಾಳುಗಳ ಅಂತಿಮ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದವು. ತಡರಾತ್ರಿವರೆಗೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪಕ್ಷದ ಮುಖಂಡರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತು. ಭಾನುವಾರ ರಾತ್ರಿ 9:30 ಸುಮಾರಿಗೆ ಬಿಜೆಪಿ 21 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಿತು. ಆದರೆ, ತಡರಾತ್ರಿಯವರೆಗೂ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದರೂ ಅಂತಿಮ ಪಟ್ಟಿ ಬಹಿರಂಗಪಡಿಸಲಿಲ್ಲ.

ಮಹಾ ನಾಯಕರ ಮೊರೆ ಹೋದ ಎಂಇಎಸ್

ಪಾಲಿಕೆ ಚುನಾವಣೆಯಲ್ಲಿ 40 ಸ್ಥಾನ ಗೆಲ್ಲುವ ಉಮೇದಿನಲ್ಲಿರುವ ಎಂಇಎಸ್ ದಿನೇದಿನೆ ತನ್ನ ಆಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಮರುಜೀವ ಪಡೆಯಲು ಮಹಾರಾಷ್ಟ್ರ ನಾಯಕರ ಮೊರೆ ಹೋಗುತ್ತಿದ್ದಾರೆ. ಎಂಇಎಸ್ ಆಕಾಂಕ್ಷಿಗಳಿಗೆ ಈಗಲೇ ಸೋಲಿನ ಭಯ ಶುರುವಾಗಿದ್ದು, ಬಿಜೆಪಿ-ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ ಎಂದು ಸ್ವತಃ ಕಾಂಗ್ರೆಸ್, ಬಿಜೆಪಿ ಮುಖಂಡರೇ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಆಕಅಂಕ್ಷಿಗಳ ವರ್ಚಸ್ಸು, ಜನಪ್ರಿಯತೆ, ಜಾತಿ ಲೆಕ್ಕಾಚಾರ ಸೇರಿ ಹಲವು ಅಂಶಗಳನ್ನು ಇಟ್ಟುಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಪರ ಅಭಿಯಾನ ಶುರುವಾಗಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ತವಕದಲ್ಲಿದ್ದಾರೆ. ಆದರೆ, ಈ ಪಕ್ಷಗಳ ಕನಸಿಗೆ ಆಮ್ ಆದ್ಮಿ ಹಾಗೂ ವಿವಿಧ ಸಂಘಟನೆಗಳ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿರುವುದು ಕೊಂಚ ತಳಮಳಕ್ಕೆ ಕಾರಣವಾಗಿದೆ.

ಪಾಲಿಕೆಯ 58 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಪಕ್ಷದ ಬಿ ಾರಂ ಕೊಡಲಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಆ. 23ರಂದು ಎಲ್ಲ ಅಭ್ಯರ್ಥಿಗಳೂ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಹೆಚ್ಚಿನ ವಾರ್ಡ್‌ಗಳಲ್ಲಿ ನಮಗೇ ಗೆಲುವು ಸಿಗುವ ವಿಶ್ವಾಸವಿದೆ.| ವಿನಯ ನಾವಲಗಟ್ಟಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಬೆಳಗಾವಿ

ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಮುಖಂಡರ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಎಂ.ಬಿ.ಪಾಟೀಲ, ನಾಸೀರ್ ಹುಸೇನ್, ಎಲ್. ಹನುಮಂತಯ್ಯ, ಸತೀಶ ಜಾರಕಿಹೊಳಿ ಇದ್ದರು.

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net