ಮಹಾತ್ಯಾಗಿಗಳ ಸ್ಮರಣೆಗೆ ಸ್ಪೂರ್ತಿ

Published on

ಚಾಮರಾಜನಗರ: ರಾಷ್ಟ್ರೀಯ ಹಬ್ಬಗಳು ನಾಗರೀಕರಲ್ಲಿ ರಾಷ್ಟ್ರೀಯ ಚಿಂತನೆ ,ದೇಶಭಕ್ತಿ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಕ್ಕಾಗಿ ದುಡಿದ ಮಹಾತ್ಯಾಗಿಗಳ ಸ್ಮರಣೆಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದು ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಿವನಂಜಪ್ಪ ತಿಳಿಸಿದರು.

ತಾಲೂಕಿನ ಅಮಚವಾಡಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಕ್ಕಾಗಿ ಸೇವೆ ಮತ್ತು ತ್ಯಾಗ ಮಾಡುವ ಗುಣವನ್ನು ಬೆಳಸಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡಿದ್ದಾರೆ .ಅವರೆಲ್ಲರ ಗೌರವ ಹಾಗೂ ಅವರ ಇತಿಹಾಸ ತಿಳಿಯಬೇಕು ಎಂದರು.

ಉಪನ್ಯಾಸಕಿ ರಾಜೇಶ್ವರಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಕಣಜಗಳಾಗಿ ಗ್ರಾಮಕ್ಕೆ ನಾಡಿಗೆ ಕೀರ್ತಿ ತರಬೇಕು. ಸ್ವಾತಂತ್ರ ಮಾನವನ ಅಭ್ಯುದಯಕ್ಕೆ ಹಾಗೂ ಅಭಿವೃದ್ಧಿಗೆ ನೂರಾರು ಅವಕಾಶಗಳನ್ನು ನೀಡಿದೆ. ಸದ್ಬಳಕೆ ಮಾಡಿಕೊಂಡು ಉನ್ನತಿಯನ್ನು ಸಾಧಿಸಿ ಎಂದು ತಿಳಿಸಿದರು.

ಉಪನ್ಯಾಸಕ ಸುರೇಶ್ ಋಗ್ವೇದಿ ಮಾತನಾಡಿ, ಭಾರತದ ರಾಷ್ಟ್ರಧ್ವಜ ಕೇಸರಿ ಬಿಳಿ ಹಸಿರು ಇಡೀ ಜಗತ್ತಿನ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜವು ನಮ್ಮೆಲ್ಲರ ಆತ್ಮಶಕ್ತಿ. ಸ್ವಾಭಿಮಾನ ದೇಶಾಭಿಮಾನದ ಗುರುತಾಗಿದೆ. ನಮ್ಮದೇ ಆದ ರಾಷ್ಟ್ರಧ್ವಜ ಸ್ಥಾಪನೆಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಲಕ್ಷಾಂತರ ಸ್ವಾತಂತ್ರ ಪ್ರೇಮಿಗಳು ರಕ್ತ ತರ್ಪಣವನ್ನು ನೀಡಿದ್ದಾರೆ ಎಂದು ಹೇಳಿದರು.

ಹಿರಿಯ ಉಪನ್ಯಾಸಕ ಮೂರ್ತಿ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯದ ಹೋರಾಟದ ವಿವಿಧ ಹಂತಗಳನ್ನು ವಿವರಿಸಿದರು. ಇದೇ ವೇಳೆ ಸಸಿ ನೆಟ್ಟು ನೀರೆರೆಯಲಾಯಿತು. ದೇವಿರಮ್ಮ, ಲತಾ, ಮಹಾಲಕ್ಷ್ಮಿ, ಗೀತಾ ,ಪ್ರವೀಣ್ ಮಧು, ಶಶಿಕಲಾ, ಶೀಲಾ, ನಾಗಲಾಂಬಿಕೆ, ಉಪನ್ಯಾಸಕರಾದ ಬಸವಣ್ಣ, ರಮೇಶ್ ,ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net