ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಬೇಡಿ

khashempur
Published on

ಬೀದರ್: ಮಹಾನ್ ದಾರ್ಶನಿಕರು, ಶರಣರು, ಸಾಧು-ಸಂತರು ಹಾಗೂ ಮಹಾತ್ಮರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಅನಿಷ್ಟ ಪದ್ಧತಿ ತೊಲಗಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು.
ತಾಲೂಕಿನ ಖಾಶೆಂಪುರ (ಪಿ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಮಹಾನ್ ವ್ಯಕ್ತಿಗಳನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಆ ವ್ಯಕ್ತಿಗಳನ್ನು ಆಯಾ ಜಾತಿಯ ಜನರಷ್ಟೇ ಆರಾಧಿಸುವಂತಾಗಿದೆ. ಇದು ಹೋಗಬೇಕು ಎಂದರು.
ಮಹಾತ್ಮರು ಇಡೀ ಸಮಾಜದ ಆಸ್ತಿ. ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವ ಮೂಲಕ ಅವರನ್ನು ಸಣ್ಣವರನ್ನಾಗಿ ಬಿಂಬಿಸುವ ಪ್ರಯತ್ನ ಕೈಡಿಬೇಕು. ಮಹಾತ್ಮರ ಜಯಂತ್ಯುತ್ಸವಗಳನ್ನು ಎಲ್ಲ ಜಾತಿ, ಜನಾಂಗದವರು ಸೇರಿ ಆಚರಿಸಬೇಕು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ ಯುವಕರಿಗೆ ಮಾದರಿಯಾಗಬೇಕಿದೆ. ಅಪ್ರತಿಮ ದೇಶಭಕ್ತನಾಗಿದ್ದ ರಾಯಣ್ಣ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಯುವ ಸಮೂಹಕ್ಕೆ ಪ್ರೇರಣೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಪ್ರಮುಖರಾದ ದತ್ತು ಕಾಡವಾದ, ಭಜರಂಗ ತಮಗೊಂಡ, ರಾಜು ಮಾಳೆ, ಸಂಜುಕುಮಾರ, ಶಿವಕುಮಾರ, ಪ್ರಲ್ಹಾದ್, ಮಲ್ಲಪ್ಪ, ಆಕಾಶ, ಸಂದೀಪ, ಅಂಬು, ಸಿದ್ದು, ರಾಜು, ವಿಷ್ಣು, ರಾಹುಲ್, ರಾಜಕುಮಾರ, ಅಖಿಲೇಶ್, ನವೀನ್, ಸಚಿನ್, ಧನರಾಜ, ಶಿವರಾಜ, ಭೀಮಣ್ಣ, ಆನಂದ, ಯಲ್ಲಾಲಿಂಗ, ಚಿದಾನಂದ, ಹಣಮಂತ, ಅನೀಲ, ಶಿವಲಿಂಗ, ಸತೀಶ್, ಪ್ರಶಾಂತ, ರಮೇಶ, ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net