ಮಹಾತ್ಮರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ

29Hallur1
ಹಳ್ಳೂರ ಗ್ರಾಮದ ಸಿದ್ಧಾರೂಢ ಮಠದದಲ್ಲಿ ಹಮ್ಮಿಕೊಂಡಿದ್ದ ಪಾರಮಾರ್ಥಿಕ ಮಹೋತ್ಸವದಲ್ಲಿ ಪರಮರಾಮಾರೂಢ ಸ್ವಾಮೀಜಿ ಮಾತನಾಡಿದರು. ಕಕಮರಿ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ , ಶಂಕರಾನಂದ ಸ್ವಾಮೀಜಿ, ಪ್ರಭುದೇವ ಸ್ವಾಮೀಜಿ, ಪರಯ್ಯ ಮಠಪತಿ ಇದ್ದರು.
Published on

ಹಳ್ಳೂರ: ದೇಹವೇ ದೇವಾಲಯ, ಆತ್ಮವೇ ಪರಮಾತ್ಮ, ಪರಮಾತ್ಮನ ಸೇವೆಯಿಂದ ಪರಿಶುದ್ಧಿ ಹೊಂದಬೇಕು. ಮಹಾತ್ಮರ ಮಾರ್ಗದರ್ಶನದಲ್ಲಿ ನಡೆದು ಜೀವನ ಉದ್ಧಾರ ಮಾಡಿಕೊಳ್ಳಬೇಕು ಎಂದು ಬಾಗಲಕೋಟೆ ಪರಮರಾಮಾರೂಢ ಸ್ವಾಮೀಜಿ ಹೇಳಿದರು.

ಸ್ಥಳೀಯ ಸದ್ಗುರು ಸಿದ್ಧಾರೂಢ ಮಠದದಲ್ಲಿ ಭಾನುವಾರ ಜರುಗಿದ ಪಾರಮಾರ್ಥಿಕ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಖ ಬಯಸುವುದಕ್ಕಿಂತ ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಿ, ಸಮಾಜ ಸುಧಾರಣೆ ಮಾಡುವವರಿಗೆ ಸಹಾಯ, ಸಹಕಾರ ನೀಡಬೇಕು. ಜನರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಾವನಗೊಳ್ಳಬೇಕು ಎಂದರು. ಕಕಮರಿ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿ, ಆದರ್ಶ ವ್ಯಕ್ತಿಯಾಗಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯವಿದೆ. ತಂದೆ-ತಾಯಿಯಂದಿರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಶಿಕ್ಷಣ, ನೀತಿ ಕಲಿಸಬೇಕು. ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು. ಅಣ್ಣ ಬಸವಣ್ಣನರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು. ಚಿದಾನಂದ ಸ್ವಾಮೀಜಿ ಮಾತನಾಡಿ, ಮೊದಲು ಸಣ್ಣವರಾಗಿ ಸತ್ಕಾರ್ಯ ಮಾಡುತ್ತ ಸಾಗಿದರೆ ಉನ್ನತ ಮಟ್ಟಕ್ಕೆರಲು ಸಾಧ್ಯ. ಕೀರ್ತನೆ ಮತ್ತು ಭಜನೆಗಳನ್ನು ಭಕ್ತಿಯಿಂದ ಆಲಿಸಬೇಕು ಎಂದರು. ಬೆಳಗ್ಗೆ 6ಕ್ಕೆ ಸಿದ್ಧಾರೂಢ ಮೂರ್ತಿಗೆ ಅಭಿಷೇಕ ಮತ್ತು ಮಹಾಪೂಜೆ, ಓಂಕಾರ ಧ್ವಜಾರೋಹಣ ನಡೆಯಿತು. ಸಿದ್ಧಾರೂಢರ ಪಲ್ಲಕ್ಕಿ ಉತ್ಸವ, ಭಾವ ಚಿತ್ರದೊಂದಿಗೆ, ಸುಮಂಗಲೆಯರಿಂದ ಆರತಿ ಮೇಳ, ಕುಂಭಮೇಳ, ಯುವಕರಿಂದ ಝಾಂಜ್ ಪಥಕ್ ಮೇಳದೊಂದಿಗೆ ಮೆರವಣಿಗೆ ಜರುಗಿತು. ಗ್ರಾಮಸ್ಥರು ಹಬ್ಬದ ಸಡಗರದಂತೆ ಸಂಭ್ರಮಿಸಿದರು. ಸಿದ್ಧಾರೂಢ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು. ಶಂಕರಾನಂದ ಸ್ವಾಮೀಜಿ, ಪ್ರಭುದೇವ ಸ್ವಾಮೀಜಿ, ಮುಖಂಡರಾದ ಹನುಮಂತ ತೇರದಾಳ, ಭೀಮಶಿ ಮಗದುಮ್ಮ, ಲಕ್ಷ್ಮಣ ಕತ್ತಿ, ಶ್ರೀಶೈಲ ಬಾಗೋಡಿ, ಭೀಮಪ್ಪ ಡಬ್ಬನವರ, ಸುರೇಶ ಕತ್ತಿ, ಸಂಗಪ್ಪ ನಾಯ್ಕ, ಶಿವಪ್ಪ ನಿಡೋಣಿ, ಸುರೇಶ ಮಗದುಮ್ಮ, ಬಾಳಪ್ಪ ಬಾಗೋಡಿ, ಪರಯ್ಯ ಮಠಪತಿ, ಕೆಂಪಣ್ಣ ಅಂಗಡಿ, ಮುರಿಗೆಪ್ಪ ಮಾಲಗಾರ, ಸಿದ್ದು ದುರದುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net