

ಹಾಸನ : ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆದರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ನಂತರ ಮಾತನಾಡಿದ ಅವರು, ಈ ದೇಶದ ಇತಿಹಾಸಕ್ಕೆ ಇಡೀ ಜೀವನವನ್ನೇ ಮುಡಿಪಾಗಿಟ್ಟು ನಮಗೆ ಸ್ವತಂತ್ರ ತಂದು ಕೊಡುವಲ್ಲಿ ಮಹಾತ್ಮ ಗಾಂಧೀಜಿ ಅವರ ತ್ಯಾಗ ಬಹು ದೊಡ್ಡದು. ಬೇರೆ ದೇಶಗಳಲ್ಲಿ ಗಾಂಧೀಜಿಯವರ ಸಾಧನೆಯನ್ನು ಸ್ಮರಣೆ ಮಾಡುತ್ತಾರೆ ಎಂದರು.
ಅನ್ಯ ರಾಷ್ಟ್ರಗಳು ದಾಳಿ ಮಾಡಿದರೂ ಕೂಡ ಭಾರತ ತನ್ನದೆಯಾದ ಇತಿಹಾಸ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಯಾವ ತೊಂದರೆ ಆಗದ ರೀತಿಯಲ್ಲಿ ಮುನ್ನಡೆಯುತ್ತಾ ಬಂದಿದೆ. ಭಾರತ ದೇಶದಲ್ಲಿ ಎಲ್ಲಾ ಸಂಸ್ಕತಿಗಳು ಇವೆ. ಗುರು-ಹಿರಿಯರಿಂದ ಮಾರ್ಗದರ್ಶನ ಪಡೆದು ನಾವೂ ನಮ್ಮ ದೇಶವನ್ನು ಧರ್ಮದ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ ಎಂದು ಹೇಳಿದರು.
ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ ಮಾತನಾಡಿ, ಗಾಂಧೀಜಿ ಅವರು ನನ್ನ ಜೀವನವೇ ಎಲ್ಲರಿಗೂ ಸಂದೇಶ ಎಂದು ಹೇಳಿದ್ದರು. ಅವರ ಜೀವನ ಚರಿತ್ರೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೆ ದೇಶದಲ್ಲಿ ಶಾಂತಿಯನ್ನು ತರಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಸದಸ್ಯ ಚಂದ್ರೇಗೌಡ, ಸತೀಶ್, ಸರ್ಕಾರಿ ಕಾಲೇಜು ಪ್ರಾಂಶುಪಾಲ ಇರ್ಷಾದ್ ಪಾಷ, ಶ್ರೀರಂಗ ಕಾಲೇಜು ಪ್ರಾಂಶುಪಾಲ ನವಿನ್ ಕುಮಾರ್, ರಘು ಇತರರು ಉಪಸ್ಥಿತರಿದ್ದರು.