

ಸವದತ್ತಿ: ಕನಕದಾಸರ ಸಾಹಿತ್ಯ ಹರಿತವಾದದು. ಅದರಲ್ಲಿ ಮೌಢ್ಯದಲ್ಲಿರುವವರನ್ನು ಎಚ್ಚರಿಸುವ ಸಂದೇಶಗಳಿವೆ. ಬುದ್ಧ, ಬಸವ, ಅಂಬೇಡ್ಕರ್ ಅಷ್ಟೇ ಅಲ್ಲದೇ ಕನಕದಾಸ, ವಾಲ್ಮೀಕಿ, ಮಡಿವಾಳ ಮಾಚಿದೇವ ಸೇರಿ 20ಕ್ಕೂ ಅಧಿಕ ಮಹಾತ್ಮರ ಚಿಂತನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಕರೀಕಟ್ಟಿ ಕ್ರಾಸ್ ಹತ್ತಿರದ ಕನಕದಾಸ ವೇದಿಕೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸರ 535ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿ ಸಹಿತ ಇತರೇ ಮಹಾತ್ಮರು ಯಾರು ಎನ್ನುವ ದಿನಗಳು ಬರಬಹುದು. ಇತಿಹಾಸ ತಿರುಚುವ ಕಾರ್ಯ ನಡೆದಿದೆ. ಎಲ್ಲರೂ ಜಾಗೃತರಾಗಬೇಕಿದೆ. ಯುವ ಪೀಳಿಗೆಯನ್ನು ಎಚ್ಚರಿಸುವ ಕಾರ್ಯ ನಡೆಯ ಬೇಕಿದೆ. ಎಚ್ಚತ್ತುಕೊಳ್ಳದಿದ್ದರೆ ಹಿಂದಿನ ಶೋಷಣೆಯ ಕಾಲ ಮರುಕಳಿಸಬಹುದು. ಆಡಂಬರದ ವೈಭವೀಕರಣಗಳ ಆಚರಣೆಗಳ ಬದಲು ಜಯಂತಿ ಮೂಲಕ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕಿದೆ ಎಂದರು. ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಜನಾಂಗ ಸಾಗುತ್ತಿರುವ ಮಾರ್ಗ ಬದಲಾಗಬೇಕಿದೆ. ಆಡಂಬರದ ಗೀಳಿನ ಬದಲು ಕನಕರ ಸಾಹಿತ್ಯ ಹಂಚುವ ಕಾರ್ಯ ನಡೆಸಿರಿ. ಡಿಜೆಗಳಿಗೆ ಹಣ ವ್ಯಯಿಸಿ ದುಂದು ವೆಚ್ಚ ಮಾಡದೆ ಅದೇ ಹಣದಿಂದ ಸಾಹಿತ್ಯ ಪುಸ್ತಕಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ನಡೆಸಬೇಕು. ಡಿಜೆ ಬದಲು ಸಾಂಸ್ಕೃತಿಕ ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು ಬೆಳಸುವ ಕಾರ್ಯ ನಡೆಯಲಿ ಎಂದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಬೆಟಸೂರ ಮಠದ ಅಜ್ಜಯ್ಯ ಸ್ವಾಮೀಜಿ, ಹೂಲಿ ಮಠದ ಉಮೇಶ್ವರ ಸ್ವಾಮೀಜಿ, ನೀಲಪ್ಪ ಅಣ್ಣಿಗೇರಿ, ಶಂಕರ ಹೆಬ್ಬಳ್ಳಿ, ಗಂಗಯ್ಯ ಅಮೋಘಿಮಠ, ನಿಕೇತರಾಜ ಮೌರ್ಯ, ಮುತ್ತು ಬಿರಾಜನವರ, ನೀಲಕಂಠ ಬರಿಗಾಲ, ಡಾ. ವೈ.ಎಂ. ಯಾಕೊಳ್ಳಿ, ಯಲ್ಲಪ್ಪ ಹೆಬ್ಬಳ್ಳಿ, ಇತರರು ಇದ್ದರು.