

ಹಾಸನ: ಮಹಾತ್ಮ ಗಾಂಧೀಜಿ ಅವರ ಆದರ್ಶ ಗುಣಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದಾಗ ಸತ್ಯ, ಪ್ರಾಮಾಣಿಕತೆ, ಪ್ರಬುದ್ಧತೆ, ಅಹಿಂಸಾ ಮಾರ್ಗವನ್ನು ಪಾಲಿಸಲು ಸಹಾಯಕಾರಿಯಾಗುತ್ತದೆ ಎಂದು ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ .ಎ.ಜೆ. ಕೃಷ್ಣಯ್ಯ ಹೇಳಿದರು.
ಕಾಲೇಜಿನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ಅ. 2, 1869 ರಂದು ಗುಜರಾತ್‌ನ ಪೋರ್ ಬಂದರ್‌ನಲ್ಲಿ ಜನಿಸಿದರು. ಇವರು ಸತ್ಯದ ಸಾಧನೆಗೆ ಅಹಿಂಸೆ ಒಂದೇ ಮಾರ್ಗ ಎಂದರಿತು ನುಡಿದಂತೆ ನಡೆದ ಮಹಾನ್ ಚೇತನ, ಸರಳ, ಸಾತ್ವಿಕ ಸ್ವಾಭಾವದ ತ್ಯಾಗಮಹಿ, ವಿಶ್ವ ಮಾನವ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿಯಲ್ಲಿ ದುಮುಕಿ ತಮ್ಮನ್ನು ಸಂಪೂರ್ಣವಾಗಿ ಹೋರಾಟಕ್ಕೆ ತೊಡಗಿಸಿಕೊಂಡ ಗಾಂಧೀಜಿ ಅವರು ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ , ಸ್ವದೇಶಿ ಸರಕುಗಳ ಬಳಕೆ , ಕ್ವಿಟ್ ಇಂಡಿಯಾ ಚಳವಳಿ, ದಂಡಿ ಯಾತ್ರೆ, ಅಹಿಂಸೆ ಮತ್ತು ಉಪವಾಸ ಸತ್ಯಾಗ್ರಹ ಮೂಲಕ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ನಮಗೆ ಸ್ವಾತಂತ್ಯ ತಂದುಕೊಟ್ಟರು ಎಂದು ತಿಳಿಸಿದರು.
1904 ಅ.2ರಂದು ಲಾಲ್ ಬಹುದ್ದೂರು ಶಾಸ್ತ್ರಿ ಅವರು ಉತ್ತರ ಪ್ರದೇಶದ ರುದ್ರ ಪ್ರಯಾಗದಲ್ಲಿ ಜನಿಸಿದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ದೇಶ ಕಂಡ ಅಪ್ರತಿಮ ಹೋರಾಟಗಾರರು, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಇವರು ಸ್ವಾತಂತ್ರ್ಯ ಹೋರಾಟಗಾರರು. ಇಂಥ ಸ್ವಾತಂತ್ರೃ ಹೋರಾಟಗಾರರ ತ್ಯಾಗ, ಬಲಿದಾನ ಸೇವೆಯನ್ನು ನಾವೆಲ್ಲ ಸ್ಮರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ. ವಿಜಯ ಕುಮಾರ್ ತೀಲೆ, ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ನೌಕರರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.