ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
Published on

ಹಾಸನ : ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ ಚಿಂತಕ , ಸುಧಾರಕ , ತತ್ವಜ್ಞಾನಿ ಕೂಡ ಹಾಗಿದ್ದರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆ ಅನುಕರಣೀಯ ಮಾಡುವುದು ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರ ಸಭೆ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಗಾಂಧೀಜಿಯವರ ಸಂದೇಶಗಳು ಸರ್ವಕಾಲಿಕ. ಇಡೀ ಜಗತ್ತಿಗೆ ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದರು.

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ಮೌಲ್ಯ, ಸಂದೇಶಗಳನ್ನು ಎಲ್ಲರೂ ಪಾಲಿಸಿ ಸಂಸ್ಕೃತ ,ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಮಾತನಾಡಿ, ಅಹಿಂಸಾ ಚಳುವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಇಡೀ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ್ದಾರೆ. ಸತ್ಯಮಾರ್ಗದ ರಕ್ತ ರಹಿತ ಚಳುವಳಿಯ ಶಕ್ತಿ ಏನೆಂಬುದನ್ನು ಅವರು ಪರಿಚಯಿಸಿದ್ದಾರೆ ಎಂದರು.

ಮಹಾತ್ಮಾ ಗಾಂಧಿಜೀ ಅತ್ಯಂತ ಸರಳ ಜೀವನ ನಡೆಸಿ ಸಮಾಜದ ಸುಧಾರಣೆಗೆ ಬದುಕನ್ನೆ ಮುಡಿಪಾಗಿಟ್ಟಿದ್ದರು ಅವರ ಆದರ್ಶ ರೀತಿ ನೀತಿಗಳನ್ನು ನಾವು ಆಚರಣೆ ಮಾಡುವ ಮೂಲಕ ಆಚರಿಸದೆ ಪಾಲಿಸುವ ಮೂಲಕ ಆಚರಿಸಬೇಕು ಎಂದು ಸಂದೇಶ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ ಶಿವಣ್ಣ ಮಾತನಾಡಿ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು ಎಂದರು.

ಸರ್ವಧರ್ಮ ಪ್ರಾರ್ಥನೆ; ಧರ್ಮಗ್ರಂಥಗಳ ಪಠಣ:
ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಗ್ರಂಥಗಳ ಪಠಣ ಹಾಗೂ ಸಂದೇಶ ವಿವರಣೆ ನಡೆಯಿತು ಕಿಶೋರ್ ಕುಮಾರ್ ಅವರು ಭಗವದ್ಗೀತೆ, ಎಸ್.ಎಸ್ ಪಾಷಾ ಅವರು ಕುರಾನ್,ಕಿರಣ್ ದಾಸ್ ಅವರು ಬೈಬಲ್,ಬಸವರಾಜ್ ಅವರು ಬೌದ್ದ ಧರ್ಮ ಹಾಗೂ ಸುಮನಾ ರಾಣಿ ಅವರು ಜೈನ ಧರ್ಮದ ಸಾರದ ಬಗ್ಗೆ ಧರ್ಮಗ್ರಂಥಗಳ ಸಂದೇಶ ವಾಚಿಸಿ ವಿವರಿಸಿದರು.

ಗಮನ ಸೆಳೆದ ವೇಶಭೂಷಣ ಸ್ಪರ್ಧೆ:
ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಹಾಡಿದ ಗಾಂಧೀಜಿಯವರ ಪ್ರಿಯ ಗೀತೆಗಳು ಇಂಪಾಗಿ ಕೇಳಿಬಂದಿತು. ಸ್ವಾತಂತ್ರ್ಯ ಚಳುವಳಿ ನೆನಪಿಸಿದ ನಾಟಕ..ಸಾಹಿತಿ ಚಂದ್ರಕಾಂತ ಪಡೆಸೂರ್ ನಿರ್ದೇಶನದಲ್ಲಿ ಸೆಂಟ್ರಲ್ ಕಾಮರ್ಸ್ ಕಾಲೇಜಿನ ಮಕ್ಕಳು ನಡೆಸಿಕೊಟ್ಟ ಸ್ವಾತಂತ್ರ್ಯ ಚಳುವಳಿ ಹಾಗೂ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತ ಕಿರು ನಾಟಕ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಾವಿರುವಂತೆ ನೆನಪುಗಳನ್ನು ಕಟ್ಟಿಕೊಟ್ಟು ಚಪ್ಪಾಳೆ ಗಿಟ್ಟಿಸಿತು. ಪುಟಾಣಿ ಮಕ್ಕಳು ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ವೇಷಭೂಷಣ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವತಿಯಿಂದ ಏರ್ಪಡಿಸಿದ್ದ ಗಾಂಧೀಜಿಯವರ ಅಪರೂಪದ ಛಾಯಾ ಚಿತ್ರಗಳ ಪ್ರದರ್ಶನ ಜನರ ಗಮನ ಸೆಳೆಯಿತು.
ಇದೇ ವೇಳೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ವೇಷ ಭೂಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಎಸ್.ಪಿ ಹರಿರಾಂ ಶಂಕರ್ , ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಈ ಕೃಷ್ಣೇಗೌಡ, ಪೌರಾಯುಕ್ತ ಪರಮೇಶ್ವರಪ್ಪ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಸ್ವಾಮಿ ಬಿ.ಎನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ .ಎಸ್ ಪ್ರಕಾಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಾಲಿಂಗಯ್ಯ ಸಿ.ಎಂ, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಯೋಗೇಶ್, ಸಮಾಜ ಸೇವಕ ಜಿ. ಮಹಾಂತಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net