ಮಹಾತ ಗಾಂಧಿ ವೇಷ ಧರಿಸಿ ಭಿಕ್ಷಾಟನೆ:ಐವರು ಮಕ್ಕಳ ರಕ್ಷಣೆ

ಮಹಾತ ಗಾಂಧಿ ವೇಷ ಧರಿಸಿ ಭಿಕ್ಷಾಟನೆ:ಐವರು ಮಕ್ಕಳ ರಕ್ಷಣೆ
Published on

ಹಾಸನ: ಮಹಾತ ಗಾಂಧಿ ವೇಷ ಧರಿಸಿ ಭಿಕ್ಷಾಟನೆ ಮಾಡುತ್ತಿದ್ದ ಐವರು ಮಕ್ಕಳನ್ನು ಶುಕ್ರವಾರ ರಾತ್ರಿ ಶ್ರಿರಾಮ ಸೇನೆ ಕಾರ್ಯಕರ್ತರು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಹಾಸನಾಂಬ ಜಾತ್ರೆಗೆ ಹೆಚ್ಚು ಭಕ್ತರು ಬರುವ ಹಿನ್ನಲೆಯಲ್ಲಿ ಮಕ್ಕಳಿಂದ ಭಿಕ್ಷಾಟನೆ ನಡೆಸಲಾಗುತ್ತಿದೆ. ಮಕ್ಕಳ ಮೈತುಂಬಾ ಸಿಲ್ವರ್ ಬಣ್ಣ ಬಳಿದು ಗಾಂಧಿಯಂತೆ ಕೈಯಲ್ಲಿ ಕೋಲು ಹಾಗು ಕನ್ನಡಕ ಹಾಕಿ ನಿಲ್ಲಿಸಲಾಗುತ್ತಿದೆ. ಪಾದಚಾರಿಗಳು, ಕಾರು ಚಾಲಕರು, ಬೈಕ್ ಸವಾರರು ಹೀಗೆ ಎಲ್ಲರನ್ನೂ ತಡೆಯುವ ಮಕ್ಕಳು ಭಿಕ್ಷೆ ಬೇಡುತ್ತಿದ್ದರು. ಹಾಸನಾಂಬ ದೇವಾಲಯ, ಎನ್.ಆರ್.ವೃತ್ತ ಹೀಗೆ ನಾನಾ ಕಡೆ ಮಕ್ಕಳು ನಿಂತಿದ್ದರು. ಅದನ್ನು ಗಮನಿಸಿದ ಶ್ರಿರಾಮ ಸೇನೆ ಕಾರ್ಯಕರ್ತರು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತಂದು ನಂತರ ಮಕ್ಕಳ ಕಲ್ಯಾಣ ಸಮಿತಿಗೆ ವಹಿಸಿದರು.

ಶ್ರಿರಾಮ ಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಅವರು ಮಾತನಾಡಿ, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಸೇರಿ ವಿವಿಧ ರಾಜ್ಯಗಳಿಂದ ಮಕ್ಕಳನ್ನು ಕರೆತಂದು ಭಿಕ್ಷಾಟನೆಗೆ ಬಿಡಲಾಗಿದೆ. ನಗರದಲ್ಲಿ ಈ ರೀತಿ 200ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಅವರೆಲ್ಲರನ್ನೂ ಈ ಬಂಧನದಿಂದ ಮುಕ್ತಗೊಳಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಆಗ್ರಹಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಕೋಮಲ ಅವರು ಮಾತನಾಡಿ, ಶ್ರಿರಾಮ ಸೇನೆ ಪದಾಧಿಕಾರಿಗಳು ಮಕ್ಕಳನ್ನು ರಕ್ಷಿಸಿದ್ದಾರೆ. 10 ರಿಂದ 14 ವರ್ಷದೊಳಗಿನ ಮಕ್ಕಳಿದ್ದಾರೆ. ಬಾಲಕರನ್ನು ದುಡಿಮೆಗೆ ಬಳಸಿಕೊಳ್ಳುವುದು ಅಪರಾಧ ಎಂದರು.

ಶ್ರಿರಾಮ ಸೇನೆ ಕಾರ್ಯಾಧ್ಯಕ್ಷ ಮಹೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಮನು, ನಗರ ಅಧ್ಯಕ್ಷ ಅರುಣ್, ತಾಲೂಕು ಅಧ್ಯಕ್ಷ ಪ್ರದೀಪ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net