ಮಹಾಜ್ಯೋತಿ ದರ್ಶನಕ್ಕೆ ಸಕಲ ಸಿದ್ಧತೆ

IMG-20221120-WA0116
Published on

ಹನೂರು: ಕಡೇ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ನ.21ರಂದು ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಜರುಗುವ ಶ್ರೀ ಮಹದೇಶ್ವರರ ಮಹಾಜ್ಯೋತಿ ದರ್ಶನಕ್ಕೆ (ದೀಪೋತ್ಸವ) ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಗಳು ನಡೆದಿವೆ.

ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಹಿನ್ನೆಲೆ ಈಗಾಗಲೇ ಮೂರು ಸೋಮವಾರಗಳಂದು ಸ್ವಾಮಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದ್ದು, ಇಂದು ಕಡೇ ಕಾರ್ತಿಕ ಸೋಮವಾರವಾಗಿದೆ. ಇಂದು ಸ್ವಾಮಿಗೆ ಬೆಳಗಿನ ಜಾವ ವಿಶೇಷ ಪೂಜೆ ನೆರವೇರಲಿದೆ. ದೇಗುಲದಲ್ಲಿ ವಿಶೇಷ ಉತ್ಸವಗಳು ಜರುಗಲಿವೆ. ಸಂಜೆ ಮಹದೇಶ್ವರರ ಮಹಾಜ್ಯೋತಿ ದರ್ಶನವು (ದೀಪೋತ್ಸವ) ಸಾವಿರಾರು ಭಕ್ತರ ಸಮುಖದಲ್ಲಿ ನೆರವೇರಲಿದೆ.

ಈ ದಿಸೆಯಲ್ಲಿ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಪ್ರಾಧಿಕಾರದ ವತಿಯಿಂದ ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ ಹಾಗೂ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ದೇಗುಲಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.


ಸೋಮವಾರ ಸಂಜೆ ನಡೆಯುವ ದೀಪೋತ್ಸವದ ಹಿನ್ನೆಲೆಯಲ್ಲಿ ದೀಪದಗಿರಿ ಒಡ್ಡುವಿನ ಬಳಿ ಅಳವಡಿಸಲಾಗಿರುವ ಬೃಹತ್ ಹಣತೆಗೆ ಬಿಳಿ ಬಣ್ಣವನ್ನು ಬಳಿಯಲಾಗಿದೆ. ಅಲ್ಲದೆ ಚಪ್ಪರವನ್ನು ನಿರ್ಮಿಸಿ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿದೆ. ದೀಪೋತ್ಸವದ ವೇಳೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಈ ಮಾರ್ಗದ ರಸ್ತೆಯನ್ನು ದುರಸ್ತಿಪಡಿಸಲಾಗಿದೆ.


ಮಹಾಜ್ಯೋತಿ ದರ್ಶನ: ಸಂಜೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿರುವ ಬಸವ ವಾಹನದಲ್ಲಿ ಪ್ರತಿಷ್ಠಾಪಿಸಿ ಸತ್ತಿಗೆ, ಸೂರಿಪಾನಿ, ಜಾಗಟೆ ಹಾಗೂ ವಾದ್ಯಗಳದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಉತ್ಸವ ನೆರವೇರಿಸಲಾಗುತ್ತದೆ. ನೈವೇದ್ಯ ಹಾಗೂ ಮಂಗಳಾರತಿ ನಂತರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೀಪದಗಿರಿ ಒಡ್ಡುಗೆ ಕೊಂಡೊಯ್ಯಲಾಗುತ್ತದೆ. ಈ ವೇಳೆ ಸ್ವಾಮಿಗೆ ಬಿಲ್ವಾರ್ಚನೆ, ದೀವಟಿಗೆ ಸೇವೆ ಹಾಗೂ ಧೂಪ ದೀಪದಾರತಿ ಸೇವೆ ನೆರವೇರಿಸಿ ಮಹಾಜ್ಯೋತಿ ಬೆಳಗಿಸಲಾಗುತ್ತದೆ. ಬಳಿಕ ದೇಗುಲಕ್ಕೆ ತೆರಳಿ ಸ್ವಾಮಿಗೆ ನೈವೇದ್ಯ ಅರ್ಪಿಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಗುತ್ತದೆ.


ಬೀಡು ಬಿಟ್ಟಿರುವ ಭಕ್ತರು: ಕಡೇ ಕಾರ್ತಿಕ ಸೋಮವಾರದಂದು ಮ.ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆ, ಮಹಾಜ್ಯೋತಿ ದರ್ಶನ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಈಗಾಗಲೇ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ತೆರಳಿ ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ.


1.5 ಲಕ್ಷ ಲಾಡು ಸಿದ್ಧ: ಮ.ಬೆಟ್ಟದಲ್ಲಿ ಪ್ರಸಾದದ ರೂಪದಲ್ಲಿ ಲಾಡು ವಿತರಿಸಲಾಗುತ್ತಿದೆ. ಪ್ರತಿ ಲಾಡಿಗೆ 25 ರೂ. ದರ ನಿಗದಿ ಮಾಡಲಾಗಿದೆ. ಸೋಮವಾರ ಸಾವಿರಾರು ಭಕ್ತರು ಆಗಮಿಸುವುದರಿಂದ ಈಗಾಗಲೇ 1.5 ಲಕ್ಷ ಲಾಡು ತಯಾರಿಸಲಾಗಿದೆ. ಅಲ್ಲದೆ ಬೇಡಿಕೆಗೆ ಅನುಗುಣವಾಗಿ ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಲಾಡು ತಯಾರಿಸಲು ಪ್ರಾಧಿಕಾರ ಸಿದ್ಧತೆ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net