"ಮಹಾ " ಸಮರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ಇಬ್ಬರು ತುಳುವರು

mng-18nov-santhosh shetty
Published on





*ಪಿ.ಬಿ.ಹರೀಶ್ ರೈ

ಮಂಗಳೂರು : ಮಹಾರಾಷ್ಟ್ರದ ರಾಜಕೀಯದಲ್ಲಿ ಕರಾವಳಿಗರು ಮಹತ್ವದ ಪಾತ್ರ ವಹಿಸಿದ್ದು, ಈ ಹಿಂದೆ ಕೆಲವರು ಸಂಸದರಾಗಿ, ಶಾಸಕರಾಗಿ ಕಾರ್ಯ ನಿರ್ವವಹಿಸುವ ಅವಕಾಶ ಪಡೆದಿದ್ದಾರೆ. ಸಚಿವರಾಗಿ ಸೇವೆ ಸಲ್ಲಿಸಿದವರೂ ಇದ್ದಾರೆ. ನ.20ರಂದು ನಡೆದ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಯಲ್ಲಿ ಉಡುಪಿ ಮೂಲದ ಇಬ್ಬರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಮುಂಬೈಯ ಭಿವಂಡಿ ಈಸ್ಟ್ ಕ್ಷೇತ್ರದಿಂದ ಶಿವಸೇನಾ (ಶಿಂದೆ ಬಣ) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂತೋಷ್.ಎಂ.ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯವರು. ಮುಂಬೈಯ ಮುಲುಂಡ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವ ರಾಕೇಶ್ ಶೆಟ್ಟಿ ಅವರು ಮೂಲತಃ ಕಾರ್ಕಳದವರು.
*ಅಭ್ಯರ್ಥಿ ವಿನಿಮಯ :
ಬಿಜೆಪಿ ನಾಯಕರಾಗಿರುವ ಸಂತೋಷ್.ಎಂ.ಶೆಟ್ಟಿ ಭಿವಂಡಿ ನಿಜ್ಹಾಮಪುರ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‌ಗೆ ಸತತ 4 ಬಾರಿ ಆಯ್ಕೆಯಾದವರು. ಒಮ್ಮೆ ಪಕ್ಷೇತರರಾಗಿಯೂ ಗೆದ್ದ ಪ್ರಭಾವಿ ನಾಯಕ. 2014 ಮತ್ತು 2019ರ ಚುನಾವಣೆಯಲ್ಲಿ ಭಿವಂಡಿ ಈಸ್ಟ್ ಕ್ಷೇತ್ರದಿಂದ ಸ್ಪರ್ಧಿಸಿದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ , ಶಿವಸೇನಾ (ಶಿಂದೆ ಬಣ) , ಎನ್‌ಸಿಪಿ (ಅಜಿತ್ ಪವಾರ್ ಬಣ) ಸಹಿತ ಇತರ ಪಕ್ಷಗಳ ‘ಮಹಾಯಿತಿ‘ ಮೈತ್ರಿ ಏರ್ಪಟ್ಟಿದೆ. ಇದರಿಂದ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವಿನಿಮಯ ನಡೆದಿದೆ. ಬಿಜೆಪಿಯ ಸಂತೋಷ್ ಶೆಟ್ಟಿ ಅವರು ಶಿವಸೇನಾ (ಶಿಂದೆ ಬಣ) ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ.
* ಪ್ರಬಲ ಎದುರಾಳಿ
ಮುಂಬೈಯ ಮುಲುಂಡ್ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡ ಕ್ಷೇತ್ರ. 2019ರ ಚುನಾವಣೆಯಲ್ಲಿ ಬಿಜೆಪಿ
ಅಭ್ಯರ್ಥಿ ಮಿಹಿರ್ ಕೊಟೆಚಾ 57 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯ ಚುನಾವಣೆಯಲ್ಲಿ ‘ಮಹಾಯಿತಿ’ ವಿರುದ್ಧ ಶಿವಸೇನಾ (ಉದ್ಧವ್ ಬಣ),ಕಾಂಗ್ರೆಸ್ , ಎನ್‌ಸಿಪಿ (ಶರದ್ ಪವಾರ್ ಬಣ) ಸಹಿತ ಇತರ ಪಕ್ಷಗಳ ‘ಮಹಾ ವಿಕಾಸ ಆಘಾಡಿ‘
ಮೈತ್ರಿ ಇದೆ. ಈ ಮೈತ್ರಿಕೂಟದಿಂದ ಕಾಂಗ್ರೆಸ್ ವಕ್ತಾರ ಹಾಗೂ ಸೇವಾದಳದ ರಾಜ್ಯಾಧ್ಯಕ್ಷ ರಾಕೇಶ್ ಶೆಟ್ಟಿ ಟಿಕೆಟ್ ಪಡೆದಿದ್ದಾರೆ. ಇವರಿಗೆ ಬಿಜೆಪಿಯ ಮಿಹಿರ್ ಕೊಟೆಚಾ ಪ್ರಬಲ ಎದುರಾಳಿಯಾಗಿದ್ದಾರೆ.
* ನಾಮಪತ್ರ ಹಿಂತೆಗೆತ
ಮುಂಬೈಯ ಬೊರಿವಿಲಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಂಸದ ಗೋಪಾಲ ಶೆಟ್ಟಿ ಅವರು ಪಕ್ಷದ ನಾಯಕರ ಮನವಿಗೆ ಸ್ಪಂದಿಸಿ ನಾಮಪತ್ರ ಹಿಂಪಡೆದಿದ್ದಾರೆ. ಗೋಪಾಲ ಶೆಟ್ಟಿ ಅವರು ಮೂಲತಃ ಪಡುಬಿದ್ರಿ ಸಮೀಪದ ಸಾಂತೂರಿನವರು. ಎರಡು ಬಾರಿ ಬೊರಿವಿಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಎರಡು ಬಾರಿ ಮುಂಬೈ ನಾರ್ತ್ ಲೋಕಸಭಾ ಕ್ಷೇತ್ರದಿಂದ 4.5 ಲಕ್ಷ ಮತಗಳ ಅಂತರದಿಂದ ಗೆದ್ದವರು. 2024ರ ಚುನಾವಣೆಯಲ್ಲಿ ಅವರು ಟಿಕೆಟ್ ವಂಚಿತರಾದರು.
*ಸಚಿವರಾದ ಸುರೇಶ್ ಶೆಟ್ಟಿ
ಮೂಲತಃ ಉಡುಪಿಯ ಎಲ್ಲೂರಿನವರಾದ ಸುರೇಶ್ ಶೆಟ್ಟಿ ಅವರು ಮುಂಬೈಯ ಅಂಧೇರಿ ಕ್ಷೇತ್ರದಿಂದ ಮೂರು ಬಾರಿ ಜಯ ಸಾಧಿಸಿದವರು. ಆರೋಗ್ಯ, ವೈದ್ಯಕೀಯ ಶಿಕ್ಷಣ, ಪರಿಸರ, ಕ್ರೀಡೆ ಮತ್ತು ಯುವಜನ ಸೇವಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2014ರ ಚುನಾವಣೆಯಲ್ಲಿ ಪರಾಭವಗೊಂಡರು.
* ಶಾಸಕರಾದ ಕರಾವಳಿಗರು
ಕಾಂಗ್ರೆಸ್ ನಾಯಕ ಜಗನ್ನಾಥ ಶೆಟ್ಟಿ 2004ರಲ್ಲಿ ಮಾಟುಂಗ ಹಾಗೂ 2009ರಲ್ಲಿ ಸಯನ್ ಕೋಲಿವಾಡ ಕ್ಷೇತ್ರದಿಂದ ಗೆದ್ದು ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದವರು. ಮೂಲತಃ ಉಡುಪಿ ಜಿಲ್ಲೆಯ ಶಿರ್ವದವರು. ಕಾರ್ಕಳದ ನಿಟ್ಟೆ ಮೂಲದ ಕೃಷ್ಣ ಹೆಗ್ಡೆ ಅವರು 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಲೆಪಾರ್ಲೆ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net