

ಚಿಕ್ಕಮಗಳೂರು: ಸಮ ಸಮಾಜವನ್ನು ನಿರ್ಮಾಣ ಮಾಡಲು, ವಿಶ್ವಕರ್ಮರಂತಹ ಮಹಾ ಪುರುಷರು ಶ್ರಮಿಸಿದ್ದಾರೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಬಸವಣ್ಣನವರು, ಕನಕದಾಸರು, ವಿಶ್ವಕರ್ಮರು, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿಯವರಂಥ ಮಹನೀಯರ ಕೊಡುಗೆ ಅಪಾರ. ಈ ಪ್ರಪಂಚ ಇರುವವರೆಗೂ ಈ ಮಹಾಪುರುಷರು ತಮ್ಮ ವಿಚಾರಧಾರೆಗಳಿಂದ ಬದುಕಿರುತ್ತಾರೆ ಎಂದು ತಿಳಿಸಿದರು.
ಶ್ರೀ ವಿಶ್ವಕರ್ಮ ಜನಾಂಗದವರು ಅವರದೇ ಆದ ವಿಶಿಷ್ಟವಾದ ರೀತಿಯ ಕಲೆ ಕರಗತ ಮಾಡಿಕೊಂಡವರು. ದೊಡ್ಡ ಬಂಡೆಕಲ್ಲುಗಳನ್ನು ಶಿಲೆಯನ್ನಾಗಿ ಹಾಗೂ ಮರದ ತೊಲೆಗಳನ್ನು ಕೆತ್ತನೆ ಮಾಡುವ ಮೂಲಕ ಮೂರ್ತಿಯ ಸ್ವರೂಪ ನೀಡುವುದು ನಿಜಕ್ಕೂ ವಿಶೇಷವಾದದ್ದು ಎಂದರು.
ವಿಶ್ವದ ಶಿಲ್ಪಕಲೆಯ ಪ್ರಥಮ ಗುರುಗಳು ಇದ್ದರೆ ಅದು ವಿಶ್ವಕರ್ಮರು ಮಾತ್ರ. ಇತ್ತೀಚೆಗೆ ವೈವಿಧ್ಯಮಯವಾದ ವಾಸ್ತುಶಿಲ್ಪಗಳು, ತಂತ್ರಜ್ಞಾನಗಳು ಬಂದಿರಬಹುದು. ಹೀಗಿದ್ದರೂ ವಿಶ್ವಕರ್ಮರು ಹಾಗೂ ಅವರ ಶಿಲ್ಪಕಲೆಯನ್ನು ಮರೆಯಲು ಸಾಧ್ಯವಿಲ್ಲ. ಸಂಸ್ಕೃತಿಯ ದೈವಶಕ್ತಿಯಾಗಿರುವ ವಿಶ್ವಕರ್ಮರು, ಮಹತ್ತರವಾದ ನಗರಗಳನ್ನು, ಪುಷ್ಪಕ ವಿಮಾನ, ಬಗೆಬಗೆಯ ಅಸ್ತç-ಶಸ್ತçಗಳನ್ನು ಸೃಷ್ಟಿಸಿ ಕೊಟ್ಟಿರುವುದು ವರ್ಣನೆಗೂ ಮೀರಿರುವಂತಹದ್ದು. ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ನಿರ್ಮಿಸಿದ ಜಕಣಾಚಾರಿ ಹಾಗೂ ಡಂಕಣಾಚಾರಿಯವರನ್ನು ಮರೆಯುವಂತಿಲ್ಲ. ಬಂಗಾರದ ಒಡವೆಗಳ ತಯಾರಿಕೆ ಕೂಡ ವಿಶ್ವಕರ್ಮ ಸಮುದಾಯದ ವಿಶೇಷತೆ ಎಂದೇ ಹೇಳಬೇಕು. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮುದಾಯದ ಶ್ರಮ ಹಾಗೂ ನಿರಂತರ ಕ್ರಿಯಾಶೀಲತೆ ಅವರ ಆದರ್ಶವನ್ನು ಬಿಂಬಿಸುತ್ತದೆ ಎಂದು ಹೇಳಿದರು.
ಶ್ರೀ ವಿಶ್ವಕರ್ಮರ ಬಗ್ಗೆ ಹಾಸನದ ಎಚ್.ಕೆ.ಎಸ್. ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ರಮೇಶ್ ಉಪನ್ಯಾಸ ನೀಡಿ, ವಿಶ್ವಕರ್ಮರಿಗೆ ಕಲೆ ರಕ್ತಗತವಾಗಿ, ವಂಶಪಾರAಪರ್ಯವಾಗಿ ಕರಗತವಾಗಿರುವಂತಹದು. ಅವರು ದೈವಸಂಭೂತ ಅಂಶಗಳನ್ನು ಹೊಂದಿದ್ದವರು ಎಂದರಲ್ಲದೆ, ಪುರಾಣದ ಪ್ರಸಂಗಗಳನ್ನು ವರ್ಣಿಸಿದರು.
ತಾಲೂಕು ಕಚೇರಿಯ ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಉಮಾಶಂಕರ್, ಶಿಲ್ಪ ಕಲಾವಿದ ವಿಶ್ವಕರ್ಮ ಆಚಾರ್, ತಾಲೂಕು ಅಧ್ಯಕ್ಷ ದಿವಾಕರ್, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್ ಸ್ವಾಗತಿಸಿದರು.