'ಮಹಿಳೆಯರಿಗೆ ಧರ್ಮಸ್ಥಳ ಸಂಸ್ಥೆ ದಾರಿದೀಪ'

11
Published on

ಮೈಸೂರು: ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯಿಂದ ಸ್ಥಾಪಿಸಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಮಹಿಳೆಯರ ಆರ್ಥಿಕ ಮಟ್ಟವನ್ನು ಸುಧಾರಿಸುವ ಮೂಲಕ ದಾರಿದೀಪವಾಗಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುವೆಂಪುನಗರ ಘಟಕದಿಂದ ವಿದ್ಯಾರಣ್ಯಪುರಂನಲ್ಲಿ ಮಂಗಳವಾರ ಆಯೋಜಿಸಿದ್ದ ಜೆ.ಪಿ.ನಗರ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಕುಟುಂಬ ನಿರ್ವಹಣೆ ಸರಾಗವಾಗುತ್ತದೆ. ಹಾಗಾಗಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಶ್ರೀವಿರೇಂದ್ರ ಹೆಗ್ಗಡೆ ಅವರು ತೋರಿದ ದಾರಿಯಲ್ಲಿ ಸಾಗಿ ಬಂದ ಮಹಿಳೆಯರು ಸ್ವ ಸಹಾಯ ಸಂಘದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸಾಲ ಪಡೆದು ಕಟ್ಟುವುದು ಮುಖ್ಯವಲ್ಲ, ಧಾರ್ಮಿಕ ಪದ್ಧತಿಯಲ್ಲಿ ಸಾಗಿ ಆ ಹಣದಿಂದ ಉಳಿತಾಯ ಮಾಡಿ ಬದುಕು ರೂಪಿಸಿಕೊಳ್ಳುವುದೇ ಮುಖ್ಯ ಎಂದರು.
ಒಂದು ಕುಟುಂಬದಲ್ಲಿ ಉತ್ತಮ ಜೀವನ ನಡೆಸಬೇಕೆಂದರೆ ಮಹಿಳೆಯರಿಂದಲೇ ಸಾಧ್ಯ. ಧರ್ಮಕ್ಕೆ ತಕ್ಕಂತೆ ನೀತಿಯಿಂದ ಬದುಕು ಕಟ್ಟಿಕೊಳ್ಳುತ್ತಾರೆ. ಸಹಕಾರ ಸಂಘಗಳು ಸಹ ಇದೇ ದಾರಿಯಲ್ಲಿ ತೊಡಗಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲತ್ತಾಯ ಮಾತನಾಡಿ, ಹಣವನ್ನು ದುಂದು ವೆಚ್ಚ ಮಾಡದೇ, ಇತಿಮಿತಿಯಲ್ಲಿ ಖರ್ಚು ಮಾಡಬೇಕು. ಸಾಲಗಾರರಾಗದೇ ಪಡೆದುಕೊಂಡಿರುವ ಸಾಲವನ್ನು ಪ್ರಾಮಾಣಿಕತೆಯಿಂದ ಮರು ಪಾವತಿಸಬೇಕು ಎಂದು ಸಲಹೆ ನೀಡಿದರು.
ಟ್ರಸ್ಟ್ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಮಹಿಳೆ ಅಬಲೆಯಲ್ಲಿ ಸಬಲೆ ಎಂದು ನಿರೂಪಿಸಬೇಕು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರಿದಿದ್ದು, ಯೋಜನೆಯ ಮುಖಾಂತರ ಬ್ಯಾಂಕ್‌ಗಳಿಂದ ಪಡೆದುಕೊಂಡ ಸಾಲವನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಟ್ರಸ್ಟ್‌ನ ಕ್ಷೇತ್ರ ಯೋಜನಾಧಿಕಾರಿ ಎನ್.ಶಕುಂತಲಾ, ಜೆ.ಪಿ.ನಗರ ವಲಯ ಮೇಲ್ವಿಚಾರಕಿ ಎನ್.ಮಮತಾ ಉದ್ಯಮಿ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net