

ಚಿಕ್ಕಮಗಳೂರು: ದತ್ತಪೀಠ ಕ್ರಾಸ್ನಿಂದ ಕೆಮ್ಮಣ್ಣುಗುಂಡಿಗೆ ಸಾಗುವ ಮಹಲ್ ಗ್ರಾಮದ ಸುತ್ತಮುತ್ತಲಿನ ಗುಡ್ಡಗಳಲ್ಲಿ ದಶಕದ ನಂತರ ಕುರಂಜಿ ಹೂ ಅರಳಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಗಿರಿಶ್ರೇಣಿಯ ಅಲ್ಲಲ್ಲಿ ನೀಲಿ ಹೂವುಗಳು ನಗೆಬೀರುತ್ತಿವೆ.
ಹೂಗಳನ್ನು ಕಣ್ತುಂಬಿಕೊಳ್ಳಲು ಎರಡ್ಮೂರು ವರ್ಷಗಳಿಂದ ಗ್ರಾಮಸ್ಥರು, ಪ್ರವಾಸಿಗರು ಕಾತರರಾಗಿದ್ದರು. 14 ವರ್ಷ ಕಳೆದರೂ ದತ್ತಪೀಠ ಮಾರ್ಗದ ಗುಡ್ಡಗಳಲ್ಲಿ ಸಮೃದ್ಧವಾಗಿ ಕುರಂಜಿ ಅರಳದೆ ಪ್ರವಾಸಿಗರಿಗೆ ನಿರಾಸೆ ಮೂಡಿಸಿತ್ತು. ಆದರೆ ಅತ್ತಿಗುಂಡಿಯ ದತ್ತಪೀಠ ತಿರುವಿನಿಂದ ಕೆಮ್ಮಣ್ಣುಗುಂಡಿಗೆ ಸಾಗುವ ಮಾರ್ಗದ ಎಡ ಪಾರ್ಶ್ವದ ಗುಡ್ಡದಲ್ಲಿ ಹೂ ಅರಳಿರುವುದಲ್ಲದೆ ಮಹಲ್ ಗ್ರಾಮದ ಗುಡ್ಡದಲ್ಲಿ ಹಸಿರಸಿರಿ ನಡುವೆ ಸಂಪೂರ್ಣ ಹೂ ಅರಳಿ ತನ್ನ ಸೊಬಗನ್ನು ಸೂಸುತ್ತಿದೆ.
ಮಲ್ಲಂದೂರು ಸಮೀಪದ ಕವಿಕಲ್ವುಠ ಸುತ್ತಮುತ್ತ ಗುಡ್ಡದ ಹಲವು ಪ್ರದೇಶದಲ್ಲಿ ಕುರಂಜಿ ಹೂ ಅರಳಿದ್ದನ್ನು ಗ್ರಾಮಸ್ಥರು ಮೊದಲ ಬಾರಿಗೆ ಕಣ್ತುಂಬಿಕೊಂಡಿದ್ದಾರೆ. ಕಲ್ಲೇರಿಮಂದಿ ಗುಡ್ಡ, ಬಟಾರ್ಬೈಲು, ರುದ್ರಗಿರಿ, ಕಲ್ವೋರೆ, ಮೂಗಿನಖಾನ್ ಗುಡ್ಡಗಳಲ್ಲಿ ನೀಲಿ ಹೂಗಳು ಕಣ್ಮನ ಸೆಳೆಯುತ್ತಿವೆ. ಈ ಭಾಗದ ಸುತ್ತಮುತ್ತ ಹೋಮ್ ಸ್ಟೇ, ರೆಸಾರ್ಟ್ಗಳಿಗೆ ಆಗಮಿಸುವ ಪ್ರವಾಸಿಗರು ಗಿಡ್ಡಿಬಾಗಿಲು ವ್ಯೂ ಪಾಯಿಂಟ್ನಿಂದ ಸೂರ್ಯಾಸ್ತದ ಅದ್ಭುತ ಕ್ಷಣವನ್ನು ನೋಡಿ ಸಂಭ್ರಮಿಸುವಾಗ ನೀಲಕುರಂಜಿ ವೈಭವವನ್ನೂ ನೋಡುವ ಅವಕಾಶ ಕೂಡಿಬಂದಿದೆ.
ವೈಜ್ಞಾನಿಕವಾಗಿ ಸ್ಟ್ರೊಬಿಲಾಂಥಿಸ್ ಕುಂತಿಯಾನ ಎಂದು ಕರೆಯಲ್ಪಡುವ ಈ ಕುರಂಜಿ ಹೂವಿನಲ್ಲಿ 84 ತಳಿಗಳಿವೆ. 3ರಿಂದ 7, ಕೆಲವು 12 ಅಥವಾ 14 ವರ್ಷಕ್ಕೊಮ್ಮೆ ಅರಳುತ್ತವೆ. ಆದರೆ ಈ ಭಾಗದಲ್ಲಿ 12 ವರ್ಷಕ್ಕೊಮ್ಮೆ ಹೂವುಗಳು ಅರಳುತ್ತವೆ.
2006ರಲ್ಲಿ ವೈಭವ: 2006ರಲ್ಲಿ ಕೈಮರದಿಂದ ದತ್ತಪೀಠಕ್ಕೆ ಸಾಗುವ ಮಾರ್ಗದಲ್ಲಿ ಕುರಂಜಿ ಹೂ ಅರಳಿದ ಸಂದರ್ಭ ಎತ್ತ ನೋಡಿದರೂ ಹಸಿರಿನ ಬೆಟ್ಟ ಸಂಪೂರ್ಣ ನೀಲ ವರ್ಣದ ಹೂವಿನ ಹಾಸು ಹೊದ್ದು ಪ್ರವಾಸಿಗರಿಗೆ ಮುದ ನೀಡಿದ್ದವು. 12 ವರ್ಷದ ಬಳಿಕ ಅಲ್ಲೊಂದು ಇಲ್ಲೊಂದು ಗಿಡಗಳಲ್ಲಿ ಹೂಗಳು ಅರಳಿದ್ದವು. ಈ ವರ್ಷ ಕೆಲವೆಡೆ ಮಾತ್ರ ಹೂ ಬಿಟ್ಟಿದೆಯಾದರೂ ಹವಾಗುಣ ವೈಪರೀತ್ಯದಿಂದ ಹಿಂದಿನ ವೈಭವವಿಲ್ಲ.
ಜೇನುಗಳ ಆಕರ್ಷಣೆ ಹೆಚ್ಚು: ಅಪರೂಪದ ಈ ಕುರಂಜಿ ಹೂವನ್ನು ಯಾರೂ ಮುಡಿಯುವುದಿಲ್ಲ. ಆದರೆ ಗುಡ್ಡದಲ್ಲಿ ಹೂವು ಅರಳುತ್ತಿದ್ದಂತೆ ಮಕರಂದ ಹೀರಲು ಜೇನ್ನೋಣಗಳು ಮುತ್ತಿಕ್ಕುತ್ತವೆ. ಪರ್ವತ ಶ್ರೇಣಿಯಲ್ಲಿ ಅರಳುವ ಈ ಹೂವು ಒಮ್ಮೆ ಅರಳಿ ಬತ್ತಿದ ನಂತರವೂ, ಗಿಡ ಒಣಗಿದರೂ ಅದರ ಬೇರು ಮಾತ್ರ ಹಸಿಯಾಗಿಯೇ ಇರುತ್ತದೆ. 12 ವರ್ಷಗಳ ನಂತರ ಹೂವು ಪುನಃ ತನ್ನ ಸೊಬಗನ್ನು ಹರಡುತ್ತದೆ. ಸೂರ್ಯ ಕಿರಣಗಳು, ಶಾಖ, ಹವಾಗುಣ ಅವಲಂಬಿಸಿ ಹೂ ನಗೆ ಬೀರುತ್ತವೆ.