

ಹಾಸನ: ಮಹರ್ಷಿ ವಾಲ್ಮೀಕಿ ರಚಿತ ರಾಮಾಯಣದಲ್ಲಿ ಬಿಂಬಿತವಾಗಿರುವ ಹಲವಾರು ಅಂಶಗಳು ಸಮಾಜಕ್ಕೆ ದಾರಿದೀಪವಾಗಿವೆ. ಆದ್ದರಿಂದಲೇ ಮಹಾತ್ಮ ಗಾಂಧೀಜಿ ಭಾರತವನ್ನು ರಾಮರಾಜ್ಯವನ್ನಾಗಿ ಮಾಡಬೇಕೆಂಬ ಮಹಾಭಿಲಾಷೆ ಹೊಂದಿದ್ದರು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ನಾರದರ ಮಾತಿನಿಂದ ಪ್ರೇರೇಪಿತರಾಗಿ ಸಾಂಸಾರಿಕ ಸಾಂಗತ್ಯವನ್ನು ತೊರೆದು, ತದೇಕಚಿತ್ತದಿಂದ ರಾಮ ಧ್ಯಾನವನ್ನು ಮಾಡಿ ಜ್ಞಾನ ಪಡೆದು ಇಂದಿಗೂ ಚಿರಸ್ಮರಣೀಯವಾಗಿರುವ ರಾಮಾಯಣ ಮಹಾಕಾವ್ಯ ರಚಿಸಿದರು. ರಾಮಾಯಣವನ್ನು ಆದರ್ಶವಾಗಿರಿಸಿಕೊಂಡು ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಸಾಮಾಜಿಕ, ರಾಜಕೀಯ, ವೈಯಕ್ತಿಕ ಜೀವನ ಸೇರಿದಂತೆ ಹಲವಾರು ವಿಷಯಗಳಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳನ್ನು ಒಳಗೊಂಡಿದೆ. ಆದ್ದರಿಂದಲೇ ಈ ಕಾವ್ಯವು ಇಂದಿಗೂ ಪ್ರಸ್ತುತವೂ ಸಮಾಜಕ್ಕೆ ಮಾದರಿಯಾಗಿಯೂ ಉಳಿದಿದೆ ಎಂದರು.
ಒಬ್ಬ ವ್ಯಕ್ತಿಯ ಹಿನ್ನೆಲೆ ಏನೇ ಆಗಿದ್ದರೂಏಕಾಗ್ರತೆ ಹಾಗೂ ಶ್ರದ್ಧೆಯಿಂದ ದೊಡ್ಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ. ರಾಮಾಯಣ ಕಾವ್ಯದಲ್ಲಿ ವಾಲ್ಮೀಕಿ ಚಿತ್ರಿಸಿರುವ ನಿದರ್ಶನಗಳು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಜೀವನಕ್ಕೆ ಹೋಲಿಕೆಯಾಗುತ್ತವೆ. ಆದ್ದರಿಂದ ಆ ಮಹಾಕಾವ್ಯದಲ್ಲಿ ವ್ಯಕ್ತವಾಗಿರುವ ಸತ್ಯ, ಧೈರ್ಯ, ಸಹನೆ, ಕ್ಷಮೆ ಹೀಗೆ ಹಲವು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ಜಯಶಂಕರ್ ಬೆಳಗುಂಬ ಮಾತನಾಡಿ, ರಾಮಾಯಣವನ್ನು ರಚಿಸಿದ ವಾಲ್ಮೀಕಿ ಜೀವನ ಕುರಿತು ಅನೇಕ ರೀತಿಯ ಉಲ್ಲೇಖಗಳಿವೆ, ಆದರೆ ವಾಸ್ತವಿಕತೆಯನ್ನು ಅರಿಯಲು ಯಾರೂ ಪ್ರಯತ್ನಿಸುತ್ತಿಲ್ಲ. ಸುಮಾರು 24,000 ಶ್ಲೋಕಗಳು ಹಾಗೂ 6 ಖಂಡಗಳನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯ ಪ್ರೀತಿ, ತ್ಯಾಗ, ಸಹನೆ, ಪ್ರಕೃತಿ ಸೌಂದರ್ಯ, ವಿರಹ ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್. ನಂದಿನಿ, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ ಶಿವಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ತಹಶೀಲ್ದಾರ್ ಶಿವಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾರತದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.