ಮಹರ್ಷಿ ವಾಲ್ಮೀಕಿ ತತ್ವಾದರ್ಶ ಮುಂದಿನ ಪೀಳಿಗೆಗೆ ಮಾದರಿ

udp-17-valmiki
Published on

ಉಡುಪಿ: ಮಹರ್ಷಿ ವಾಲ್ಮೀಕಿಯವರು ನಾಗರಿಕ ಸಮಾಜದ ಮೊದಲ ಅಕ್ಷರ ಜ್ಞಾನಿ. ರಾಮಾಯಣದ ಮೂಲಕ ಬಿಂಬಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವು ಮುಂದಿನ ಪೀಳಿಗೆಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ನಗರಸಭೆ ಮತ್ತು ಪರಿಶಿಷ್ಟ ಪಂಗಡಗಳ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಮಾನವೀಯ ನೆಲೆಯಲ್ಲಿ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ನಾಗರಿಕರು ಬದ್ಧರಾಗಬೇಕು. ವಾಲ್ಮೀಕಿಯ ವರು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅದನ್ನು ದೈನಂದಿನ ಜೀವನದಲ್ಲಿ ಪಾಲಿಸಬೇಕು ಎಂದರು .
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಚಿಂತನೆಗಳನ್ನು ಜೀವನದ ಪ್ರತಿ ಹಂತದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಚೇತನ್​ ಶೆಟ್ಟಿ ಕೋವಾಡಿ ಉಪನ್ಯಾಸ ನೀಡಿ, ರಾಮಾಯಣ ಮಹಾಕಾವ್ಯದಲ್ಲಿನ ಶ್ಲೋಕಗಳು ಸಾಮಾಜಿಕ ಮೌಲ್ಯಗಳು, ಆದರ್ಶ ಪರಂಪರೆ, ಮಾನವೀಯ ಮೌಲ್ಯಗಳು, ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮದ ಸಂದೇಶಗಳು ಸದಾ ಕಾಲಕ್ಕೆ ಅನ್ವಯವಾಗುವ ಜೀವನ ಸಂದೇಶಗಳನ್ನು ನೀಡುತ್ತವೆ. ರಾಮಾಯಣದ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಟಾಧಿಕಾರಿ ಡಾ. ಕೆ. ಅರುಣ್​, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ. ಎಸ್​. ಮತ್ತಿತರರು ಉಪಸ್ಥಿತರಿದ್ದರು. ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಾಣ ಸ್ವಾಮಿ ಎಂ. ಸ್ವಾಗತಿಸಿ, ಐ.ಟಿ.ಡಿ.ಪಿ ಸಿಬ್ಬಂದಿ ಶ್ರೀದೇವಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ 2023-&24 ನೇ ಸಾಲಿನಲ್ಲಿ ಕೊರಗ, ಮರಾಟಿ ನಾಯ್ಕ್​ ಹಾಗೂ ಮಲೆಕುಡಿಯ ಸಮುದಾಯದ ಎಸ್​.ಎಸ್​.ಎಲ್​.ಸಿ ಹಾಗೂ ಪಿ.ಯು.ಸಿಯಲ್ಲಿಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net