

ಹಾಸನ: ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಪ್ರತಿಯೊಬ್ಬರೂ ತಮ್ಮ ಅಂತರಾಳಕ್ಕೆ ಇಳಿಸಿಕೊಳ್ಳಬೇಕು, ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಮಹನೀಯರ ಮಾತುಗಳು ಕೇವಲ ಮಾತುಗಳಾಗಿಯೇ ಉಳಿಯುತ್ತವೆಯೇ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಸಾಹಿತಿ ವಿಶ್ವೇಶ್ವರ ಎನ್. ಮೇಟಿ ಹೇಳಿದರು.
ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನ ವತಿಯಿಂದ ಭಾನುವಾರ ನಡೆದ ರಾಜ್ಯ ಮಟ್ಟದ ಒಂಭತ್ತನೇ ಕವಿ, ಕಾವ್ಯ ಸಂಭ್ರಮ -2024ರ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಮುಂಬಯಿಯ ವಿಶ್ವೇಶ್ವರ ಎನ್. ಮೇಟಿ ಅವರು, ಕನ್ನಡ ನಾಡಿನಲ್ಲಿ ಸಾಕಷ್ಟು ಸಂಖ್ಯೆಯ ಕವಿಗಳು ಕನ್ನಡದ ಮನಸ್ಸುಗಳನ್ನು ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕವಿ ಕಾವ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ. ಹಾಸನ ಜಿಲ್ಲೆಯಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ದೊರತಿರುವುದು ಹಾಸನ ಜಿಲ್ಲೆಯ ಹೆಮ್ಮೆಯ ವಿಚಾರ. ಜತೆಗೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯ, ಹಾಗೂ ದೇಶಕ್ಕೆ ಮಾದರಿಯಾಗಿದೆ. ಕನ್ನಡದ ಮನಸ್ಸುಗಳು ಪ್ರಪಂಚದಾದ್ಯಂತ ವಿಸ್ತರಿಸಿವೆ. ಇದು ಕನ್ನಡದ ಶಕ್ತಿ. ಮುಂದಿನ ದಿನಗಳಲ್ಲಿ ಕನ್ನಡದ ಶಕ್ತಿ ಇನ್ನಷ್ಟು ಹೆಚ್ಚಾಗಲಿ ಎಂದು ಹೇಳಿದರು.
ಹತ್ತು ಹಲವಾರು ವೈಶಿಷ್ಟೃಗಳಿಂದ ಕೂಡಿದ ಹಾಸನ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಪುರಾತನ ಕಾಲದಿಂದಲೂ ನಾಡಿನ ಮೇಲೆ ಪ್ರಭಾವ ಬೀರುತ್ತ ಬಂದಿದೆ. ಕನ್ನಡದ ಪ್ರಮುಖ ಕಾದಂಬರಿಕಾರರಾದ, ಶಿವರಾಮ ಕಾರಂತರು, ಎಸ್.ಎಲ್. ಬೈರಪ್ಪ ಅವರು ಮರಾಠಿಯ ಜನಮನದಲ್ಲಿಯೂ ತುಂಬಿಕೊಂಡಿದ್ದಾರೆ. ಅವರ ಕಾದಂಬರಿಗಳನ್ನು ಕನ್ನಡದಿಂದ ಮರಾಠಿಗೆ ಅನುವಾದ ಕಾರ್ಯದಲ್ಲಿ ತೊಡಗಿರುವ ಉಮಾ ಕುಲಕರ್ಣಿ, ಮಿನಾ ವಾಂಗಿಕರ, ಮೊದಲಾದವರ ಸಾಧನೆ ಮೆಚ್ಚುವಂಥದ್ದು. ಎಲ್ಲಾದರೂ ಇರು, ಎಂಥಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು? ಎನ್ನುವ ಕವಿವಾಣಿಯಂತೆ ಮಹಾರಾಷ್ಟ್ರದ ಕನ್ನಡಿಗರಾದ ನಾವುಗಳು ಪ್ರಾಮಾಣಿಕವಾಗಿ ಇತ್ತ ಜನ್ಮಭೂಮಿಗೂ ಅತ್ತ ಕರ್ಮಭೂಮಿಗೂ ಬೇಧಭಾವ ಮಾಡದೇ ಸ್ಪಂದಿಸುತ್ತ ಬಂದಿದ್ದೇವೆ ಎಂದು ತಿಳಿಸಿದರು.
ಸಂಘಟನೆಗಳು ತಮ್ಮದೇ ಆದ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ಇತ್ತೀಚಿನ ದಿನಗಳಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು ಕಾರ್ಯಕ್ರಮಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳು ತುಂಬುವುದು ಬೇಸರದ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಸುಬ್ಬು ಹೊಲೆಯಾರ್, ಪ್ರಕಾಶನ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು. ಸಾಹಿತ್ಯ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಬೇಕು. ಮಾಣಿಕ್ಯ ಪ್ರಕಾಶನ ಕೆಲಸ ಮಾಡುತ್ತಿದೆ. ಪ್ರಶಸ್ತಿಗಳನ್ನು ಪಡೆಯುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಈ ನಡುವೆ ಒಳ್ಳೆ ಕೃತಿಕಾರರನ್ನು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ಮಾಣಿಕ್ಯ ಪ್ರಕಾಶನದಿಂದ ನೀಡಲಾಗುತ್ತಿದೆ. ಅಂತಿಮವಾಗಿ ನಮ್ನೊಳಗಿನ ಪ್ರೀತಿ, ಕರುಣೆ ಬರಬೇಕು. ಕನ್ನಡದ ಪ್ರಜ್ಞೆ ವಿಶ್ವ ಪ್ರಜ್ಞೆ ಆಗಬೇಕು. ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಬೇಕು. ಕಾವ್ಯ ಎಂದರೆ ಜನರ ಮಿಡಿಯುವ ಹೃದಯ ಆಗಿರಬೇಕು ಎಂದು ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಸಾಕಷ್ಟು ಸಂಘಟನೆಗಳು ಸಮಾಜದಲ್ಲಿವೆ. ಅದರಲ್ಲಿ ಕೆಲವು ಸಂಘಟನೆಗಳು ಗಟ್ಟಿಯಾಗಿ ಕೆಲಸ ಮಾಡುತ್ತಾ ಬಂದಿವೆ. ಯಾವುದೇ ಪ್ರಶಸ್ತಿ ಪಡೆಯಲು ಅದರ ಹಿಂದೆ ಅರ್ಜಿ ಹಾಕಿಕೊಂಡು ಹೋಗದೇ ಅರ್ಹರಿಗೆ ಪ್ರಶಸ್ತಿ ಸಿಕ್ಕಿದಾಗ ಆ ಪ್ರಶಸ್ತಿಯಲ್ಲಿ ಗಟ್ಟಿತನ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಹಾಗೂ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ನೀಡಲಾಯಿತು. ಅಧಿಕಾರ ಹಸ್ತಾಂತರವನ್ನು ಕವಿಕಾವ್ಯ ಸಂಭ್ರಮ ನಿಕಟಪೂರ್ವ ಸರ್ವಾಧ್ಯಕ್ಷ ಡಾ. ಅಮರೇಶ್ ಪಾಟೀಲ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಮಾಣಿಕ್ಯ ಪ್ರಕಾಶಕರಾದ ದೀಪಾ ಉಪ್ಪಾರ್, ಸಾಹಿತಿ ಶೈಲಜಾ ಹಾಸನ್, ಪದ್ಮಾವತಿ ವೆಂಕಟೇಶ್, ಸುಮಾ, ಸಿ.ಎನ್. ನೀಲಾವತಿ ಇತರರು ಉಪಸ್ಥಿತರಿದ್ದರು.