

ಆಲೂರು: ಭಾರತ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶ ಭಕ್ತರು, ಹೋರಾಟಗಾರರು, ನಾಗರಿಕರು ಪ್ರಾಣ ತ್ಯಾಗ, ಬಲಿದಾನಗೈದಿದ್ದಾರೆ. ಪೂರ್ವಜರಲ್ಲಿದ್ದ ಸ್ವದೇಶಾಭಿಮಾನದ ಕಿಚ್ಚು ಹಾಗೂ ಶ್ರದ್ಧೆಯ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದ್ದು ಅದನ್ನು ಮುಂದಿನ ಪೀಳಿಗೆಗೂ ತಿಳಿಸಿಕೊಡುವ ಪ್ರಯತ್ನ ನಮ್ಮಿಂದ ನಡೆಯಬೇಕಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕಿನ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೋರಾಡಿದ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ. ದೇಶದ ಪ್ರಗತಿ ಮತ್ತು ಉನ್ನತಿಗೆ ನಾವೆಲ್ಲರೂ ನಮ್ಮಿಂದ ಸಾಧ್ಯವಾಗುವಷ್ಟು ರೀತಿಯಲ್ಲಿ ಸಹಕರಿಸಬೇಕು. ಇದು ಸ್ವಾತಂತ್ರೋತ್ಸವಕ್ಕೆ ನೀಡುವ ಕೊಡುಗೆಯಾಗಲಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಮೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಖ್ಯ ಭಾಷಣಕಾರ ಉಪನ್ಯಾಸಕ ಕೃಷ್ಣಯ್ಯ ಮಾತನಾಡಿ, ವಿವಿಧ ಭಾಷೆ, ಸಂಸ್ಕೃತಿ ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಿರುವುದು ಭಾರತದ ಹೆಗ್ಗಳಿಕೆ. ಇದಕ್ಕೆ ನಮ್ಮ ಸ್ವಾಂತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಭದ್ರ ಬುನಾದಿ ಹಾಗೂ ನಂತರ ಆಡಳಿತ ಚುಕ್ಕಾಣಿಯನ್ನು ಹಿಡಿದ ಧೀಮಂತ ನಾಯಕರ ಪರಿಶ್ರಮವೇ ಕಾರಣ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ, ಗೀತಾ ಗಾಯನ, ಧ್ವಜ ವಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಾಲೂಕು ನಾಗರಿಕ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಪಟ್ಪಣ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಎಸ್.ಜಯಣ್ಣ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಡಾ.ಜಯರಾಜ್, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶಿವಮೂರ್ತಿ, ದಲಿತ ಮುಖಂಡ ಅಜ್ಜೇನಹಳ್ಳಿ ರಂಗಯ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಹರೀಶ್, ಸಂತೋಷ್ ಧರ್ಮ, ಅರುಣ್ ನಾಯಕ್, ಅಬ್ದುಲ್ ಖುದ್ದೂಸ್, ಬಿಜೆಪಿ ಮುಖಂಡರಾದ ಹನುಮಂತೇಗೌಡ, ಉಪತಹಸೀಲ್ದಾರ್ ಆಶೋಕ್ ಮುಂತಾದವರು ಹಾಜರಿದ್ದರು.