ಮಹನೀಯರ ತ್ಯಾಗ ಬಲಿದಾನದ ಸಂಕೇತ

ಹಿರೀಸಾವೆ ಹೋಬಳಿ ಉಳ್ಳಾವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದರು.
15 HRS 01
Published on

ಹಿರೀಸಾವೆ: ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ನಾವೆಲ್ಲರೂ ಸ್ವಚ್ಛಂದವಾಗಿ ಬದುಕಲು ಸಾಧ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.


ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಈ ಮಣ್ಣಿನ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ವೀರರು ತಮ್ಮ ರಕ್ತ ಹರಿಸಿ ಜೀವ ಹಾಗೂ ಜೀವನವನ್ನು ತ್ಯಾಗ ಮಾಡಿದ್ದಾರೆ ಎಂದರು.
ಸ್ವಾತಂತ್ರ್ಯ ಎಂಬುದು ಕೇವಲ ಒಂದು ದಿನ ಆಚರಿಸುವ ಹಬ್ಬವಲ್ಲ. ಪ್ರತಿದಿನ ಕ್ಷಣ ಕ್ಷಣವೂ ಸಂಭ್ರಮಿಸುವುದಾಗಿದೆ. ಡಾಕ್ಟರ್, ಇಂಜಿನಿಯರ್, ವಿಜ್ಞಾನಿ ಹಾಗೂ ಇನ್ನಿತರ ಉನ್ನತ ಉದ್ದೆಗಳನ್ನು ತಮ್ಮ ಮಕ್ಕಳಿಗೆ ಹರಸುವ ಪಾಲಕರು ಮಾತ್ರ ನನ್ನ ಮಗ ದೇಶ ಕಾಯುವ ಒಬ್ಬ ಸೈನಿಕನಾಗಬೇಕೆಂದು ಎಂದಿಗೂ ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಎಸ್‌ಡಿಎಂಸಿ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಪುಟಾಣಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.


ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಳೆದ ವಾರ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಘಟಕದ ವತಿಯಿಂದ ಬಹುಮಾನ ವಿತರಿಸಲಾಯಿತು.


ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯ ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಆರ್.ಶ್ರೀನಿವಾಸ್, ಮಾಜಿ ಅಧ್ಯಕ್ಷ ಸತೀಶ್, ಶಾಲಾ ಮುಖ್ಯಶಿಕ್ಷಕ ಕುಮಾರ್, ಸಹ ಶಿಕ್ಷಕಿ ಶ್ರೀದೇವಿ, ಅತಿಥಿ ಶಿಕ್ಷಕಿ ಗೀತಾ, ಆಶಾ ಕಾರ್ಯಕರ್ತೆ ಅನಸೂಯಾ, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಸಿಬ್ಬಂದಿ ರೇವಮ್ಮ, ಸರಸಮ್ಮ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net