

ಬಳ್ಳಾರಿ : ಇಂದಿನ ಯುವ ಪೀಳಿಗೆಯು ಸಾಧನೆಯ ಶಿಖರವನ್ನೇರಲು ಮಹನೀಯರ ಮೌಲ್ಯ, ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಎಡಿಸಿ ಮಹಮ್ಮದ್.ಎನ್ ಝುಬೇರ್ ಕರೆ ನೀಡಿದರು.
ನಗರದ ಜಿಲ್ಲಾಡಳಿತ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಮಂಗಳವಾರ ನಡೆದ ಐತಿಹಾಸಿಕ ಬೆಟ್ಟದ(ಕೋಟೆ) ಮೇಲೆ ಆಯೋಜಿಸಿದ್ದ ರಾಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಹಾನುಭಾವರು ಪ್ರಾಣವನ್ನು ಮುಡಿಪಾಗಿಟ್ಟಿದ್ದಾರೆ. ಮಹನೀಯರ ತ್ಯಾಗ ಬಲಿದಾನಗಳ ಪ್ರತೀಕವೇ ಸ್ವಾತಂತ್ರೃವಾಗಿದ್ದು, ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರರ ಮೌಲ್ಯ ಬೆಳೆಸಿಕೊಂಡು, ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು. ಯುವಕರು ತಮ್ಮ ಯೌವ್ವನವನ್ನು ದೇಶ ಪ್ರೇಮಕ್ಕಾಗಿ ಬೆಳೆಸಿಕೊಳ್ಳಬೇಕು. ಭವ್ಯ ರಾಜ್ಯ ಸುಭದ್ರ ರಾಷ್ಟ ಕಟ್ಟುವಲ್ಲಿ ಯುವಪೀಳಿಗೆಯ ಪ್ರಮುಖ ಪಾತ್ರವಾಗಿದೆ. ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಮತ್ತು ಒಲಂಪಿಕ್ಸ್ ಕ್ರೀಡೆಗಳಲ್ಲಿಯೂ ಸಹ ರಾಷ್ಟ್ರಧ್ವಜ ಹಾರಿಸಬೇಕು. ಐತಿಹಾಸಿಕ ಏಕಶಿಲಾ ಬೆಟ್ಟದಲ್ಲಿ ರಾಷ್ಟದ್ವಜ ಹಾರಿಸುವುದು ದೇಶಪ್ರಮ ಹೆಚ್ಚಿಸುವುದರೊಂದಿಗೆ ದೇಶದ ಹಿರಿಮೆಯಲ್ಲಿ ಪಾತ್ರರಾಗಬಹುದು ಎಂದು ವಿದ್ಯಾರ್ಥಿಗಳು ದೇಶಾಭಿಮಾನ ಬಿಂಬಿಸಿದರು. ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ಸಮಾಜದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕಿವಿಮಾತು ಹೇಳಿದರು.
ಐತಿಹಾಸಿಕ ಬೆಟ್ಟ ಹತ್ತುವ ಮುನ್ನ ದೇಶಭಕ್ತಿ ಘೋಷಣೆ ಕೂಗಿದರು. ಬೆಟ್ಟ ಹತ್ತುವ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.