

ಚಿಕ್ಕಬಳ್ಳಾಪುರ : ಭಾರತವನ್ನು ಸದೃಢ ದೇಶವನ್ನಾಗಿಸುವಲ್ಲಿ ಯುವ ಜನರ ಪಾತ್ರ ಮಹತ್ತರವಾದುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.
ನಗರದ ಭುವನೇಶ್ವರಿ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಮರ್ಥ ಭಾರತಕ್ಕಾಗಿ ವಾಕಾಥಾನ್‌ಗೆ ಚಾಲನೆ ನೀಡಿ ಮಾತನಾಡಿ, ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶದ ಮೂಲಕ ಜನರಲ್ಲಿ ಹೊಸ ಚೈತನ್ಯ ಮೂಢಿಸಿದ ಸ್ವಾಮಿ ವಿವೇಕಾನಂದರು ದೇಶದ ಗರಿಮೆ ಹೆಚ್ಚಿಸಿದರು. ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ವಿಶಿಷ್ಟ ಭಾಷಣದ ಮೂಲಕ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು. ಇವರನ್ನು ಯುವ ಜನತೆ ಮಾದರಿಯಾಗಿ ಸ್ವೀಕರಿಸಿ, ಆದರ್ಶ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಪ್ರತಿಯೊಬ್ಬರು ಸಮಾಜಕ್ಕೆ ಜೀವನ ಮುಡುಪಾಗಿಟ್ಟ ಮಹನೀಯರ ಆದರ್ಶ ತತ್ವಗಳ ಬಗ್ಗೆ ತಿಳಿದುಕೊಳ್ಳಬೇಕು. ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಪ್ರಮುಖ ರಸ್ತೆಗಳಲ್ಲಿ ವಾಕಾಥಾನ್ : ಉತ್ತಮನಾಗು ಉಪಕಾರಿಯಾಗು, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಸಮರ್ಥ ಭಾರತ ಸೇರಿ ವಿವಿಧ ಸಂದೇಶಾತ್ಮಕಗಳ ಭಿತ್ತಿ ಫಲಕಗಳನ್ನಿಡಿದುಕೊಂಡು ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಿಕ್ಷಕರು, ಸಮಾಜಸೇವಕರು ವಾಕಾಥಾನ್‌ನಲ್ಲಿ ಸಾಗಿದರು. ನಗರದ ಭುವನೇಶ್ವರಿ ವೃತ್ತದಿಂದ ಎಂ.ಜಿ.ರಸ್ತೆ, ಬಿ.ರಸ್ತೆಯಲ್ಲಿ ಘೋಷಣೆಗಳೊಂದಿಗೆ ಸಾಗಿ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರದ ಬಗ್ಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ, ಯುವ ಮುಖಂಡರಾದ ಎನ್.ಮಂಜುನಾಥ್ ರೆಡ್ಡಿ, ರವಿ ಮತ್ತಿತರರು ಇದ್ದರು.