ಮಹನೀಯರ ಜಯಂತಿ ಆಚರಣೆ

Published on

ಕೊಳ್ಳೇಗಾಲ: ಪಟ್ಟಣದ ಗುರುಭವನದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ, ಶ್ರೀ ಮಹಾಯೋಗಿ ವೇಮನ, ಶ್ರೀ ಮಡಿವಾಳ ಮಾಚಿದೇವ, ಶ್ರೀ ಸವಿತಾ ಮಹರ್ಷಿ, ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಉಪವಿಭಾಗಾಧಿಕಾರಿ ಗೀತಾ ಹುಡೇದ ಮಾತನಾಡಿ, ಪ್ರತಿಯೊಬ್ಬರೂ ಮಾಡುವ ಕಾಯಕ ಶ್ರೇಷ್ಠವಾದದ್ದು. ಮಾಡುವ ವೃತ್ತಿ ನೋಡಿ ಗೌರವ ನೀಡುವುದು ತಪ್ಪು. ದೇಶದ ಎಲ್ಲ ಜನರಿಗೂ ಸಂವಿಧಾನದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಿದೆ. ಇಲ್ಲಿ ಯಾರು ಮೇಲೂ ಅಲ್ಲ, ಕೀಳೂ ಅಲ್ಲ. ಆದ್ದರಿಂದ ಪ್ರತಿಯೊಬ್ಬರೂ ಮಾಡುವ ಕೆಲಸವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಸೋಮಣ್ಣ ಮಾತನಾಡಿ, ಸವಿತಾ ಸಮಾಜ ತಮ್ಮ ಕ್ಷೌರಿಕ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿ ಬದುಕುತ್ತಿರುವ ಸಮಾಜವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಾಜದ ಸೇವೆ ಎಲ್ಲರಿಗೂ ತಿಳಿಯಲು ಪ್ರತಿ ಶಾಲೆಯಲ್ಲೂ ಸವಿತಾ ಮಹರ್ಷಿಗಳ ಜಯಂತಿ ನಡೆಯಬೇಕಿದೆ ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಗೋವಿಂದ ರಾಜು ಮಾತನಾಡಿ, 12ನೇ ಶತಮಾನದ ಮಹಾನ್ ಶರಣರ ಪೈಕಿ ಮಡಿವಾಳ ಮಾಚಿದೇವ ಕೂಡ ಒಬ್ಬರಾಗಿದ್ದಾರೆ. ಅನುಭವ ಮಂಟಪದಲ್ಲಿ ಉತ್ತಮ ಹೆಸರು ಪಡೆದಿದ್ದರು ಎಂದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ, ತಹಸೀಲ್ದಾರ್ ಮಂಜುಳಾ, ತಾ.ಪಂ. ಇಒ ಮಹೇಶ್, ನಗರಸಭೆ ಆಯುಕ್ತ ನಂಜುಂಡಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net