

ಚಿತ್ರದುರ್ಗ: ಬಸವ ಜಯಂತಿ ಏ. 30ರಂದು, ಶಂಕರಾಚಾರ್ಯ ಜಯಂತಿ ಮೇ 2ರಂದು, ಮಹರ್ಷಿ ಭಗೀರಥ ಜಯಂತಿಯನ್ನು 4ರಂದು ಅರ್ಥಪೂರ್ಣವಾಗಿ ಆಚರಿಸಲು ನಗರದ ಎಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತೀರ್ಮಾನಿಸಲಾಯಿತು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾಮಟ್ಟಕ್ಕೆ ತಲಾ 50 ಸಾವಿರ ರೂ., ತಾಲೂಕು ಮಟ್ಟಕ್ಕೆ 25 ಸಾವಿರ ರೂ. ನೀಡುತ್ತಿದ್ದು, ಸರ್ಕಾರದಿಂದ ಆಚರಿಸುವ ಎಲ್ಲ ಜಯಂತಿಗಳಿಗೂ ಇದು ಅನ್ವಯವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸಭೆಗೆ ತಿಳಿಸಿದರು.
ಮೂವರು ಮಹನೀಯರ ಜಯಂತಿಗಳನ್ನು ನಿಗದಿತ ದಿನಾಂಕದಂದು ಬೆಳಗ್ಗೆ 11ಕ್ಕೆ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು. ಬಸವ ಜಯಂತಿಯಂದು ವಚನ ಗಾಯನ, ವಿಶ್ವಗುರು ಕುರಿತು ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 3ಕ್ಕೆ ನೀಲಕಂಠೇಶ್ವರ ಸ್ವಾಮಿ ದೇಗುಲ ಮುಂಭಾಗ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಗುವುದು. ನಂತರ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಸಂಜೆ 6ಕ್ಕೆ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಬಸವ ಜಯಂತಿ ಮೆರವಣಿಗೆಯಲ್ಲಿ ಆನೆ ಬಳಸಲಾಗುವುದು. ಮುನ್ನಾ ದಿನ 29ರಂದು ವೀರಶೈವ ಲಿಂಗಾಯತ ಸಮುದಾಯದಿಂದ ಬೈಕ್ ರ್ಯಾಲಿ ಆಯೋಜಿಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು. ಆನೆ ಬಳಕೆಗೆ ಕಡ್ಡಾಯವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪತ್ರ ಪಡೆಯುವಂತೆ ಎಡಿಸಿ ಸೂಚಿಸಿದರು.
ಆದಿಗುರು ಶಂಕರಾಚಾರ್ಯರ ಜಯಂತಿಯಂದು ಸನಾತನ ಧರ್ಮ ಸುಧಾರಣೆಯಲ್ಲಿ ಅವರು ನೀಡಿದ ಕೊಡುಗೆಗಳ ಕುರಿತು ಉಪನ್ಯಾಸ ನಡೆಯಲಿದೆ ಎಂದರು. ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಅವಮಾನಿಸಿದ ಕೃತ್ಯ ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಂಘದಿಂದ ಇದೇ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಎಎಸ್ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಬೈಕ್ ರ್ಯಾಲಿ ಆಯೋಜಿಸುವ ಕುರಿತು ಪೊಲೀಸ್ ಇಲಾಖೆಗೆ ಮನವಿ ಪತ್ರ ನೀಡಬೇಕು. ಇದರಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು. ಚಾಲನಾ ಪರವಾನಿಗೆ, ವಾಹನ ನೋಂದಣಿ, ವಿಮಾ ಪತ್ರ ಹೊಂದಿರಬೇಕು ಎಂದು ತಿಳಿಸಿದರು.
ಭಗೀರಥ ಜಯಂತಿ ಸಾಂಕೇತಿಕ: ಹೊಸದುರ್ಗದ ಭಗೀರಥ ಗುರುಪೀಠದಿಂದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು, ದಿನಾಂಕ ನಿಗದಿಯಾಗಿಲ್ಲ. ಆದ್ದರಿಂದ ಜಿಲ್ಲಾ ಕೇಂದ್ರದಲ್ಲಿ 4ರಂದು ಸಾಂಕೇತಿಕವಾಗಿ ಆಚರಿಸುವಂತೆ ಉಪ್ಪಾರ ಸಮಾಜದ ಮುಖಂಡರು ಸಭೆಯಲ್ಲಿ ಎಡಿಸಿಗೆ ಕೋರಿದರು. ಸರ್ಕಾರದ ನಿರ್ದೇಶನದಂತೆ ಸರಳವಾಗಿ ಆಚರಿಸಲಾಗುವುದು. ಅನುದಾನ ಬಳಕೆ ಕುರಿತಂತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ವಿವಿಧ ಸಮಾಜದ ಮುಖಂಡರಾದ ಮಹಡಿ ಶಿವಮೂರ್ತಿ, ಎಸ್.ಷಡಾಕ್ಷರಯ್ಯ, ಸುನಿತಾ ಮಲ್ಲಿಕಾರ್ಜುನ್, ಶಿವಾನಂದಪ್ಪ, ಕೆಇಬಿ ಷಣ್ಮುಖಪ್ಪ, ಪಿ.ಎಸ್.ಮಂಜುನಾಥ್, ಡಿ.ಪ್ರಾಣೇಶ್‌ರಾವ್, ಎನ್.ವೀರೇಶ್, ಎಸ್.ನಾಗರಾಜ ಇತರರಿದ್ದರು.