

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಜ.14ರಂದು ಶಿವಯೋಗಿ ಸಿದ್ಧರಾಮೇಶ್ವರ, 19 ರಂದು ಮಹಾಯೋಗಿ ವೇಮನ ಹಾಗೂ 21ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯುತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಡಿಸಿ ಕಚೇರಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
14 ರ ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿ ಸಿದ್ಧರಾಮೇಶ್ವರರ ಜಯಂತಿ ಆಚರಿಸಲು ಸಮುದಾಯದ ಮುಖಂಡರು ಸಲಹೆ ನೀಡಿದರು. ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾಲಂಕಾರ ಹಾಗೂ ಅವರ ಕುರಿತು ಸುಗಮ ಸಂಗೀತ, ವಿಶೇಷ ಉಪನ್ಯಾಸದೊಂದಿಗೆ ವಿಶೇಷವಾಗಿ ಆಚರಿಸಲಾಗುವುದು ಎಂದು ಎಡಿಸಿ ಹೇಳಿದರು.
ಭೋವಿ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್. ಲಕ್ಷ್ಮಣ್, ಖಜಾಂಚಿ ಇ. ಮಂಜುನಾಥ್, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಸೇರಿ ಸಮುದಾಯದ ಮುಖಂಡರು ಇದ್ದರು.
ಮಹಾಯೋಗಿ ವೇಮನ
ಸಮುದಾಯದ ಮುಖಂಡರ ಸಲಹೆಯಂತೆ 19ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಣೆಗೆ ಸಭೆ ನಿರ್ಧರಿಸಿತು. ವೇಮನರ ಭಾವಚಿತ್ರಕ್ಕೆ ಪುಷ್ಪಾಲಂಕಾರ, ಸಂಗೀತ, ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಎಲ್ಲ ಸಮುದಾಯದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಎಡಿಸಿ ಮನವಿ ಮಾಡಿದರು.
ಇಂಟೂರು ಜಯರಾಮರೆಡ್ಡಿ, ಜಿ.ಎಚ್. ವಿಜಯಕುಮಾರ್, ಕಟ್ಟಾ ತಿಪ್ಪಾರೆಡ್ಡಿ, ಕೆ.ಆರ್. ಬಾಬುರೆಡ್ಡಿ, ಹನುಮಂತರೆಡ್ಡಿ, ಡಿ.ಪಿ. ತಿಪ್ಪೇಸ್ವಾಮಿ, ಶಿವಣ್ಣರೆಡ್ಡಿ, ವೆಂಕಟಶಿವರೆಡ್ಡಿ ಸೇರಿ ರೆಡ್ಡಿ ಸಮುದಾಯದ ನಾನಾ ಮುಖಂಡರು ಇದ್ದರು.
ಅಂಬಿಗರ ಚೌಡಯ್ಯ
ಜಿಲ್ಲಾ ಕೇಂದ್ರದಲ್ಲಿ ಜ.21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಗುವುದು ಎಂದು ಎಡಿಸಿ ಹೇಳಿದರು. ಸಮಾರಂಭದ ಸ್ಥಳದ ಬಗ್ಗೆ ಸಭೆಯಲ್ಲಿ ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಜಿಲ್ಲಾಡಳಿತಕ್ಕೆ ತಿಳಿಸಲಾಗುವುದು ಎಂದು ಸಮಾಜದ ಮುಖಂಡರು ಹೇಳಿದರು.
ಜಯಂತಿ ಆಚರಣೆ ಅನುದಾನವನ್ನು ಸರ್ಕಾರ ಕನಿಷ್ಠ 3 ಲಕ್ಷ ರೂ.ಗೆ ಹೆಚ್ಚಿಸಬೇಕು. ಗಂಗಾಮತಸ್ಥ ಸಮುದಾಯಕ್ಕೆ 2 ಎಕರೆ ಜಮೀನು ಒದಗಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಮುದಾಯದ ಮುಖಂಡರು ಒತ್ತಾಯಿಸಿದರು.
ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾಲಂಕಾರ, ವಚನ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಎಲ್ಲ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಡಿಸಿ ಕೋರಿದರು.
ಗಂಗಾಮತಸ್ಥ ಸಮುಧಾಯದ ಮುಖಂಡರಾದ ಎಚ್.ಡಿ. ರಂಗಯ್ಯ, ಶ್ರೀನಿವಾಸ್, ಆರ್. ಜಯಣ್ಣ, ಎಸ್. ಕೃಷ್ಣಮೂರ್ತಿ, ಓಂಕಾರ್, ಎಸ್.ಡಿ. ರಾಮಸ್ವಾಮಿ, ರವಿಚಂದ್ರಪ್ಪ, ಮಂಜುನಾಥ್, ಮಹೇಶ್, ಎ. ಮಂಜುನಾಥ್, ಮೂರ್ತಿ, ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಇದ್ದರು.