ಮಹನೀಯರ ಗುಣಗಾನ ಭಾಷಣಕ್ಕೆ ಸೀಮಿತವಲ್ಲ, ಸಚಿವ ಎಂಟಿಬಿ ನಾಗರಾಜ್ ಅಭಿಮತ, ಹೊಸಕೋಟೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

web 3
Published on

ಹೊಸಕೋಟೆ: ಮಹನೀಯರ ಗುಣಗಾನ ಭಾಷಣಕ್ಕೆ ಸೀಮಿತವಾಗಬಾರದು, ಅವರ ಕಂಡ ಸಮಾನತೆಯ ಕನಸು, ಸಹಬಾಳ್ವೆಯ ಆಶಯವನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ತಾಲೂಕು ಕಚೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಅಂಬೇಡ್ಕರ್ ಜಯಂತಿ ಹಾಗೂ ಡಾ.ಬಾಬು ಜಗಜೀವನ್‌ರಾಮ್ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ದೇಶದಾದ್ಯಂಥ ಆಚರಿಸುತ್ತೇವೆ, ಅಂದಿನ ದಿನ ಮಹನೀಯರ ಕೊಡುಗೆ, ಅವರ ಆದರ್ಶಗಳ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ, ಆದರೆ ಅದನ್ನು ಅಲ್ಲಿಗೆ ಸೀಮಿತಗೊಳಿಸಬಾರದು. ಅವರ ಮಾರ್ಗದರ್ಶನದಲ್ಲಿ ನಡೆದು ಮಹನೀಯರ ಆಶಯಗಳಿಗೆ ನಿಜವಾದ ಅರ್ಥಸಿಗುವಂತೆ ನಾವೆಲ್ಲ ನಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ಆಧಾರ ಮೇಲೆ ನಿಂತಿದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯು ಇದರಲ್ಲೆ ಅಡಕವಾಗಿದೆ ಎಂದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅಂಬೇಡ್ಕರ್ ತತ್ವವನ್ನು ನಾವೆಲ್ಲರೂ ಅನುಸರಿಸಬೇಕು ಎಂದು ಕರೆ ನೀಡಿದರು.

ಶಾಸಕನಾದ ಮೇಲೆ ಸ್ವಾತಂತ್ರ್ಯ: ಈ ಹಿಂದೆ ಹೊಸಕೋಟೆಯಲ್ಲಿ ಸರ್ವಾಧಿಕಾರ ಆಡಳಿತವಿತ್ತು, ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಮೇಲೆಯೇ ಕ್ಷೇತ್ರಕ್ಕೆ ಸ್ವಾತಂತ್ರ್ಯ ಸಿಕ್ಕಿದಂತಾಯಿತು ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತು 1952 ರಲ್ಲಿ ಸಂವಿಧಾನ ಅಂಗೀಕಾರವಾಯಿತು. ಆದರೆ ಹೊಸಕೋಟೆಗೆ ನಾನು ಶಾಸಕನಾಗಿ ಆಯ್ಕೆಯಾದ ಮೇಲೆಯೇ ಸ್ವಾತಂತ್ರ್ಯ ದೊರೆತಿದ್ದು, ಜನರ ಆಶೀರ್ವಾದದಿಂದ 3 ಬಾರಿ ಶಾಸಕನಾಗಿ ಒಂದು ಬಾರಿ ವಿಧಾನ ಪರಿಷತ್ ಸದಸ್ಯನಾಗಿ 2 ಬಾರಿ ಮಂತ್ರಿಯಾಗಿ ಜನರ ಸೇವೆ ಸಲ್ಲಿಸುತಿದ್ದೇನೆ ಎಂದರು. ಈ ಹಿಂದೆ ಚುನಾವಣೆಯಲ್ಲಿ ಮತ ಕೇಳಲು ಮುಖಂಡರು ಹಳ್ಳಿಗಳಿಗೆ ಕಾಲಿಡುವಂತಿರಲಿಲ್ಲ, ಮತದಾರರು ಸಹ ನಿರ್ಭಯವಾಗಿ ಮತದಾನ ಮಾಡಲು ಹೆದರುವಂತ ಪರಿಸ್ಥಿತಿ ಇತ್ತು. ಪ್ರಸ್ತುತ ಈ ಪರಿಸ್ಥಿತಿ ಬದಲಾಗಿದ್ದು, ಹೊಸಕೋಟೆಯಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net