ಮಹನೀಯರ ಆದರ್ಶಗಳಿಗೆ ತಿಲಾಂಜಲಿ

CTD DSHALLI ANUBAVA---005
Published on

ಚಿತ್ರದುರ್ಗ: ಶಾಂತಿ, ನೆಮ್ಮದಿ, ಸಹಬಾಳ್ವೆ ಹಾಗೂ ಸಮಾನತೆಗೆ ಬುದ್ಧನ ಸಂದೇಶ, ಪ್ರಗತಿಪರ ವೈಚಾರಿಕ ವಚನ ಚಳವಳಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಮತ್ತು ಸಂವಿಧಾನ ಸಹಕಾರಿಯಾಗಿವೆ ಎಂದು ಸಾಹಿತಿ ಜಡೆಕುಂಟೆ ಮಂಜುನಾಥ್ ಹೇಳಿದರು.
ಮುರುಘಾಮಠದಿಂದ ಶನಿವಾರ ತಾಲೂಕಿನ ಡಿಎಸ್ ಹಳ್ಳಿಯಲ್ಲಿ ಏರ್ಪಡಿಸಿದ್ದ ಅನುಭಾವ ಶ್ರಾವಣ ಕಾರ‌್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮಹನೀಯರು ತೋರಿದ ಮಾರ್ಗದಲ್ಲಿ ಸಾಗದೆ ದ್ವೇಷಾಸೂಯೆಗಳಿಂದ ಬದುಕುತ್ತಾ, ಅವರ ಆದರ್ಶಗಳಿಗೆ ತಿಲಾಂಜಲಿ ಇಟ್ಟಿದ್ದೇವೆ ಎಂದು ವಿಷಾದಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಧಾರೆಗಳು ನಮ್ಮನ್ನು ಎಚ್ಚರಿಸದೆ ಇದ್ದಿದ್ದರೆ, ಈ ಸಮಾಜವಿನ್ನೂ ಮೌಢ್ಯ, ಅಸಮಾನತೆ ಮನೋಭಾವದಲ್ಲಿ ಇರುತ್ತಿತ್ತು. ಮಹನೀಯರ ಆದರ್ಶಗಳನ್ನು ದಿನನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಚಿತ್ರದುರ್ಗ ವೀರಶೈವ ಸಮಾಜದ ಕಾರ‌್ಯದರ್ಶಿ ಪಿ.ವೀರೇಂದ್ರಕುಮಾರ್ ಅವರು ಮಾತನಾಡಿ, ಅಸೂಯೆ ದೂರವಿಟ್ಟು ಸಹಬಾಳ್ವೆಯಿಂದ ಜೀವನ ಸಾಗಿಸಬೇಕಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ಬಸವಣ್ಣನ ವಾಕ್ಯ ಪಾಲಿಸಿದರೆ ದ್ವೇಷ, ಮಾತ್ಸರ್ಯ ಸುಳಿಯದು ಎಂದರು.
ಶ್ರೀ ಮುರುಘೇಂದ್ರ ಸ್ವಾಮೀಜಿ ಅವರು ಮಾತನಾಡಿದರು. ಚಿತ್ರದುರ್ಗ ಬೃಹನ್ಮಠ ಪ್ರೌಢಶಾಲೆ ಮುಖ್ಯಶಿಕ್ಷಕಿ ಆಶಾರಾಣಿ, ಪ್ರಿಯದರ್ಶಿನಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಹಾಂತೇಶ್, ಬಸವರಾಜ್ ಕಟ್ಟಿ, ಬಸವರಾಜಪ್ಪ ಮತ್ತಿತರ ಗ್ರಾಮಸ್ಥರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿವಲೀಲಾ ಸ್ವಾಗತಿಸಿದರು. ಲಿಂಗರಾಜು ನಿರೂಪಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net