ಮಹದೇಶ್ವರಸ್ವಾಮಿ ಹುಲಿ ವಾಹನೋತ್ಸವ

5-pnp 1
ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರಗ್ರಾಮದಲ್ಲಿ ಗ್ರಾಮಸ್ಥರು ಮಲೆ ಮಹದೇಶ್ವರಸ್ವಾಮಿಯ ಹುಲಿವಾಹನೋತ್ಸದ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿದರು.
Published on

 ಪಾಂಡವಪುರ: ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಮಲೆ ಮಹದೇಶ್ವರಸ್ವಾಮಿಯ ಹುಲಿ ವಾಹನೋತ್ಸವ ಸೋಮವಾರ ಅದ್ದೂರಿಯಾಗಿ ನಡೆಯಿತು.

ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಮಹದೇಶ್ವರಸ್ವಾಮಿಗೆ ಪ್ರತಿವರ್ಷ ಸುತ್ತಲಿನ ಗ್ರಾಮಸ್ಥರು ದೀಪಾವಳಿ ಸಂದರ್ಭದಲ್ಲಿ ಹುಲಿವಾನೋತ್ಸವ ನಡೆಸುವುದು ಸಂಪ್ರದಾಯ. ಅದರಂತೆ ಸೋಮವಾರ ಗ್ರಾಮಸ್ಥರು ಸರತಿಯಂತೆ ವಿವಿಧ ಜಾನಪದ ಕಲಾತಂಡಗಳು, ಮಂಗಳವಾದ್ಯದೊಂದಿಗೆ ಮಹದೇಶ್ವರರ ಹುಲಿವಾಹನೋತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಳಿಕ ಮಹದೇಶ್ವರಪುರ ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಕೊಂಡೊಯ್ದರು.

ಟಿ.ಎಸ್.ಛತ್ರ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಬಗೆಯ ಹೂವುಗಳಿಂದ ಹುಲಿ ವಾಹನೋತ್ಸವವನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮದ ಯುವಕರು ಹುಲಿವಾಹನ ಮೆರವಣಿಗೆ ನಡೆಸಿದರು. ಮಹದೇಶ್ವರಸ್ವಾಮಿಯ ಅಪಾರ ಭಕ್ತರು ಹುಲಿವಾಹನಕ್ಕೆ ಕಡಲೆಪುರಿ, ಹಣ್ಣು-ದವನ ಎಸೆದು ಉಘೇ ಮಾದಪ್ಪ... ಉಘೇ ಮಾದಪ್ಪ ಎಂಬ ಉದ್ಘೋಷ ಮೊಳಗಿಸಿದರು.

ನಂತರ ಟಿ.ಎಸ್.ಛತ್ರಗ್ರಾಮದಿಂದ ಮಹದೇಶ್ವರಪುರ ಗ್ರಾಮದ ಮಹದೇಶ್ವರ ದೇವಸ್ಥಾನದವರೆಗೂ ವೀರಗಾಸೆ, ಚಂಡೆಮೇಳ, ತಮಟೆ, ಪೂಜಾಕುಣಿತ, ನೃತ್ಯತಂಡ ಸೇರಿದಂತೆ ವಿವಿಧ ಕಲಾತಂಡಗಳು ಹುಲಿ ವಾಹನೋತ್ಸವಕ್ಕೆ ಮೆರುಗು ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net