

ಪಿರಿಯಾಪಟ್ಟಣ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಶನಿವಾರ ಪಟ್ಟಣದ ಶ್ರೀ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಮುಂಜಾನೆಯಿಂದಲೇ ದೇವಾಲಯದ ಗರ್ಭಗುಡಿಯಲ್ಲಿ ಉದ್ಭವ ಹಾಗೂ ಉತ್ಸವಮೂರ್ತಿಗಳನ್ನು ವಿಶೇಷವಾಗಿ ಬಿಲ್ಪಪತ್ರೆಯಿಂದ ಪೂಜಿಸಲಾಯಿತು. ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಸಾಂಗವಾಗಿ ನೆರವೇರಿತು. 11.30ರ ವೇಳೆಗೆ ಮಹಾಮಂಗಳಾರತಿ ಬಳಿಕ ಉತ್ಸವ ಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ಸಿಂಗರಿಸಲಾಗಿದ್ದ ರಥದಲ್ಲಿ ಕೂರಿಸಿ ಪೂಜೆ ಮಾಡಲಾಯಿತು. ಬಳಿಕ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಸುತ್ತ ರಥ ಪ್ರದಕ್ಷಿಣೆ ಹಾಕಿದ ಬಳಿಕ ರಥವನ್ನು ಸ್ವಸ್ಥಾನಕ್ಕೆ ಎಳೆದು ತಂದು ನಿಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಮಹದೇಶ್ವರ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಮಹದೇಶ್ವರಸ್ವಾಮಿ ಭಕ್ತ ಮಂಡಳಿ ಸದಸ್ಯರಾದ ನಂಜುಂಡಪ್ಪ, ನಾಗಣ್ಣ, ತ್ಯಾಗರಾಜ್, ಮಲ್ಲಿಕಾರ್ಜುನ, ಬಸವಣ್ಣ ಮತ್ತಿತರರು ಹಾಜರಿದ್ದರು.