

ಕೊಳ್ಳೇಗಾಲ: ತಾಲೂಕಿನ ಅರೆಪಾಳ್ಯದ ಮಹದೇಶ್ವರ ದೇವಾಲಯದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹುಲಿ ವಾಹನೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಹುಲಿ ವಾಹನದಲ್ಲಿ ಮಹದೇಶ್ವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಚಿಕ್ಕಿಂದುವಾಡಿ ಮಠದ ಶ್ರೀ ಬಾಲಷಡಕ್ಷರ ಸ್ವಾಮೀಜಿ, ಕೊಳ್ಳೇಗಾಲ ಬಿಕ್ಷದ ಮಠದ ಶ್ರೀ ಶಿವಪ್ಪ ಸ್ವಾಮೀಜಿ ಅವರು ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹುಲಿ ವಾಹನೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಭಕ್ತರು ಹುಲಿ ವಾಹನವನ್ನು ಹೊತ್ತು ದೇವಾಲಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತ ಮಹದೇಶ್ವರನಿಗೆ ಹಷೋದ್ಗಾರ ಮೊಳಗಿಸಿದರು. ಈ ವೇಳೆ ಮಂಗಳವಾದ್ಯದ ಇಮ್ಮಳೆಕ್ಕೆ ನಂದಿ ಕಂಬ ಪ್ರದರ್ಶನ ಹಾಗೂ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು.
ವೆಂಕಟೇಶ್ವರ ಡ್ರಾಮಾ ಸೀನ್ಸ್ ಮಾಲೀಕ ನಾಗಭೂಷಣ್, ಅಡುಗೆ ಜಗದೀಶ್, ಇತರ ಭಕ್ತರ ಸಹಯೋಗದಲ್ಲಿ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಈ ವೇಳೆ ರೈತ ಮುಖಂಡ ಮಾಲಂಗಿ ಬಸವರಾಜಪ್ಪ, ನಂದೀಶ್ ಮಧುವನಹಳ್ಳಿ, ಶಶಿಕಾಂತ್, ಜಯಕೃಷ್ಣ, ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್. ಮುಖಂಡರಾದ ಕಿರಾತಾರ್ಜುನ ಮೂರ್ತಿ, ಅಕ್ತರ್, ಸಿಗಬತುಲ್ಲಾ, ಸ್ವಾಮಿ ನಂಜಪ್ಪ, ಮುಷ್ತಾಕ್ ಅಹಮದ್, ಮಧುವನಹಳ್ಳಿ ವೀರಭದ್ರಪ್ಪ, ಮಹೇಂದ್ರ ಮತ್ತಿತರಿದ್ದರು.