ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟವು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು, ಮುಂಬರುವ ದೀಪಾವಳಿ ಜಾತ್ರೆ ಸಂದರ್ಭದಲ್ಲಿ ಹೆಚ್ಚು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಅನುಸರಿಸುವ ಮೂಲಕ ಹಸಿರು ದೀಪಾವಳಿ ಆಚರಣೆಗೆ ಎಲ್ಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದರು.
ದೀಪಾವಳಿ ಜಾತ್ರೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ನಿಷೇಧ ವಲಯ ನಿಯಮಾವಳಿಗಳನ್ನು ಅನುಸರಿಸುವ ಸಂಬಂಧ ಅಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಜಿಲ್ಲಾಧಿಕಾರಿಯವರು ಮಾತನಾಡಿದರು. ಅ.18 ರಿಂದ 22 ರವರೆಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು 30 ಸಾವಿರ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಕ್ಷೇತ್ರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ವಿಧದ ಪ್ಲಾಸ್ಟಿಕ್ ವಸ್ತುಗಳ ಬಳಕೆ, ವಿತರಣೆ ಅಥವಾ ಸಾಗಣೆ ಸಂಪೂರ್ಣ ನಿಷೇಧಿಸಿರುವ ಬಗ್ಗೆ ಪಾಲನೆ ಮಾಡಬೇಕು. ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದರು.
ಮಲೆ ಮಹದೇಶ್ವರ ಬೆಟ್ಟ ಸಂಪರ್ಕಿಸುವ ಎಲ್ಲಾ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭಕ್ತರು ಪ್ಲಾಸ್ಟಿಕ್ ವಸ್ತುಗಳನ್ನು ತರಲು ಪ್ರಯತ್ನಿಸಿದರೆ ಅವುಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಹೀಗಾಗಿ ಸಾಕಷ್ಟು ಮುಂಚಿತವಾಗಿಯೇ ಭಕ್ತಾಧಿಗಳಿಗೆ ಪ್ಲಾಸ್ಟಿಕ್ ಬಳಕೆ ಮಾಡದಿರುವ ಕುರಿತು ತಿಳಿವಳಿಕೆ ನೀಡಬೇಕಿದೆ. ಪ್ಲಾಸ್ಟಿಕ್ ಗೆ ಪರ್ಯಾಯ ವಸ್ತುಗಳನ್ನು ಉಪಯೋಗಿಸಬೇಕಿದ್ದು, ಈ ನಿಟ್ಟಿನಲ್ಲಿ ಮಲೆ ಮಹದೇಶ್ವರ ಅಭಿವೃದ್ದಿ ಪ್ರಾಧಿಕಾರ ಪರ್ಯಾಯ ಪರಿಸರ ಸ್ನೇಹಿ ವಸ್ತುಗಳ ಮಾರಾಟಕ್ಕೆ ಮುಂದಾಗಲಿದೆ ಎಂದರು.
ಕ್ಷೇತ್ರದಲ್ಲಿ ದಾನಿಗಳು ಆಹಾರ ಮತ್ತು ನೀರಿನ ವಿತರಣೆಗೆ ಕಾಗದದ ತಟ್ಟೆ, ಲೋಟದಂತಹ ಬಯೋ ಜೀವಸಂಯೋಜ್ಯ (ಡಿಗ್ರೇಡಬಲ್) ವಸ್ತುಗಳನ್ನೇ ಬಳಸಬೇಕು. ನೀರಿನ ವಿತರಣೆಗೆ ಮಾತ್ರ 5 ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪುನರ್‌ಬಳಕೆಗೆ ಯೋಗ್ಯವಾದ ಬಾಟಲಿಗಳನ್ನು ಬಳಸಬಹುದು. ಕ್ಷೇತ್ರದಲ್ಲಿ ಪರು ಮಾಡುವ (ಅಡುಗೆ) ಅನ್ನದಾನಿಗಳು ಕಡ್ಡಾಯವಾಗಿ ನೊಂದಣಿ ಮಾಡಿಸಿ ಪೂರ್ವಾನುಮತಿ ಪಡೆಯಬೇಕು. ದಾನಿಗಳು ವಿತರಣೆಯ ಬಳಿಕ ಉಂಟಾಗುವ ತ್ಯಾಜ್ಯವನ್ನು ಅವರೇ ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದರು. ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಹನೂರು ತಹಶೀಲ್ದಾರರಾದ ಚೈತ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಮತ್ತು ಇತರರು ಹಾಜರಿದ್ದರು.