ಮಹದೇಶ್ವರ ಬೆಟ್ಟದಲ್ಲಿ ದೀಪೋತ್ಸವ ಸಂಭ್ರಮ

21 HANUR 3 A
Published on

ಮಹದೇಶ್ವರ ಬೆಟ್ಟ/ ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಕಡೇ ಕಾರ್ತಿಕ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿನ್ನದ ತೇರಿನ ಉತ್ಸವ ಹಾಗೂ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.


ಕಡೇ ಕಾರ್ತಿಕ ಪೂಜೆಯ ಹಿನ್ನ್ನೆಲೆಯಲ್ಲಿ ದೇಗುಲವನ್ನು ವಿವಿಧ ಪುಷ್ಪ, ತಳಿರು-ತೋರಣ ಹಾಗೂ ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇಗುಲದ ಮುಂಭಾಗದ ರಸ್ತೆ ಹಾಗೂ ದೀಪದಗಿರಿ ಒಡ್ಡುವಿನ ರಸ್ತೆಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇಗುಲದ ಮುಂಭಾಗದಲ್ಲಿ ಚಿನ್ನದ ತೇರಿನ ಉತ್ಸವ ಹಾಗೂ ದೀಪದಗಿರಿ ಒಡ್ಡುವಿನಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಧಾರ್ಮಿಕ ಕೈಂಕರ್ಯದೊಂದಿಗೆ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.


ಸೋಮವಾರ ಬೆಳಗಿನ ಜಾವ ದೇಗುಲದಲ್ಲಿ 3.30 ರಿಂದ 6.30ರವರೆಗೆ ಸ್ವಾಮಿಗೆ ಬೇಡಗಂಪಣ ಅರ್ಚಕರು ಸಂಕಲ್ಪಾದಿ ಸೇವೆ, ಷೋಡಶೋಪಚಾರ, ಗಣಪತಿ ಪೂಜೆ, ಶಿವಾಷ್ಟೋತ್ತರ ಶತನಾಮ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಪಂಚ ಕಳಸ ಸಮೇತ ನವರತ್ನ ಕಿರೀಟಧಾರಣೆಯೊಂದಿಗೆ ನೈವೇದ್ಯ ಸಮರ್ಪಿಸಿದರು. ನಂತರ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.


ವಿಶೇಷ ಪೂಜೆ: ಸೋಮವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದೇಗುಲದ ಆಲಂಬಾಡಿ ಬಸವನ ಸಾಲಿನ ಕಂಠ ಶಾಲೆಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಉಪವಾಸವಿದ್ದ ಅರ್ಚಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಸ್ವಾಮಿಯ ಕೊಳಗದ ಮುಖವಾಡಕ್ಕೆ ಹಾಲು, ಜೇನುತುಪ್ಪ, ಅಷ್ಟಗಂಧ, ಸಕ್ಕರೆ, ಮೊಸರು, ನಿಂಬೆರಸ, ಖರ್ಜೂರ, ದ್ರಾಕ್ಷಿ, ಕಲ್ಲು ಸಕ್ಕರೆ ಅಭಿಷೇಕವನ್ನು ನೆರವೇರಿಸಿ ಮಹಾಮಂಗಳಾರತಿ ಬೆಳಗಿಸುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.


ವಿದ್ಯುತ್‌ದೀಪ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಚಿನ್ನದ ತೇರಿನಲ್ಲಿ ರಾತ್ರಿ 7ರ ವೇಳೆಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿನ್ನದ ತೇರಿನ ಉತ್ಸವ ದೇಗುಲದ ಸುತ್ತ ಪ್ರದಕ್ಷಿಣಾಕಾರದಲ್ಲಿ ಸಾಗಿತು.
ಹರಕೆ ಹೊತ್ತ ಭಕ್ತರು ಈ ಸಂದರ್ಭ ತೇರಿನ ಹಿಂದೆ ಕಳಸ ಹೊತ್ತು ಸಾಗಿದರು. ರಥಕ್ಕೆ ಧನ, ಧಾನ್ಯ ಎಸೆದು ಧನ್ಯತೆ ಮೆರೆದರು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಜಯಘೋಷ ಮೊಳಗಿಸಿದರು.

ವಿವಿಧ ಆರತಿ ಸಮರ್ಪಣೆ: ಉಪವಾಸವಿದ್ದ ಬೇಡಗಂಪಣ ಅರ್ಚಕರು ರಾತ್ರಿ 8.30ರಲ್ಲಿ ಸ್ವಾಮಿಗೆ ಪುಷ್ಪಾರ್ಚನೆ, ಬಿಲ್ವಾರ್ಚನೆ ನೆರವೇರಿಸಿದರು. ಬಳಿಕ ಧೂಪದಾರತಿ, ಏಕಾರತಿ, ಕುಂಭದಾರತಿ, ತ್ರಿಯಾರತಿ, ತಟ್ಟೆಯ ಆರತಿ, ಗೋಪುರದ ಆರತಿ ಸಹಿತ ಮಹಾ ಮಂಗಳಾರತಿ ಬೆಳಗಿದರು. ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಬಸವ ವಾಹನದಲ್ಲಿ ಕುಳ್ಳಿರಿಸಿ ಸತ್ತಿಗೆ, ಸೂರಿಪಾನಿ, ಜಾಗಟೆ ಹಾಗೂ ವಾದ್ಯ ಮೇಳದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಉತ್ಸವವನ್ನು ನೆರವೇರಿಸಲಾಯಿತು.


ಬೇಡಗಂಪಣ ಅರ್ಚಕರು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರ ಸಮ್ಮುಖ ಪಂಜಿನೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇಗುಲದ ದಕ್ಷಿಣ ಭಾಗದಲ್ಲಿ ಮಾದಪ್ಪ ನೆಲೆಸಿರುವ ದೀಪಗಿರಿ ಒಡ್ಡುವಿಗೆ ಕೊಂಡೊಯ್ದರು. ಅರ್ಚಕರು ದೀವಟಿಕೆಯಿಂದ ಹಣತೆ (ಮಹದೇಶ್ವರರ ಮಹಾಜ್ಯೋತಿ) ಬೆಳಗಿಸುವುದರ ಮೂಲಕ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net