

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದು, ಶ್ರೀ ಮಹದೇಶ್ವರರ ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಪತ್ನಿ ಶೈಲಜಾ, ಪುತ್ರಿ ಪ್ರಿಯಾ, ಮೊಮ್ಮಕ್ಕಳಾದ ದಕ್ಷ ಹಾಗೂ ಗೌರಿ ಅವರೊಂದಿಗೆ ಆಗಮಿಸಿದ ಸಚಿವರು ದೇಗುಲದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಬಳಿಕ ಕುಟುಂಬ ಸಮೇತ ತೆರಳಿ ಚಿನ್ನದ ತೇರಿಗೂ ಪೂಜೆ ಸಲ್ಲಿಸಿದರು. ಇದೇ ವೇಳೆ ಸಚಿವರು ದೇಗುಲದ ಸುತ್ತಾ ಜರುಗುವ ಚಿನ್ನದ ತೇರಿನ ಉತ್ಸವದಲ್ಲಿ ಭಕ್ತರೊಡನೆ ಭಾಗಿಯಾಗಿದ್ದರು. ಸಾಲೂರು ಬೃಹನ್ಮಠಕ್ಕೆ ತೆರಳಿದ ಸಚಿವರು ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ಆಶೀರ್ವಚನ ಪಡೆದರು. ಹಿರಿಯ ಶ್ರೀ ಗುರುಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿ ಪ್ರಸಾದ ಸ್ವೀಕರಿಸಿದರು.
ಪ್ರತಿಮೆ ವೀಕ್ಷಣೆ: ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸುತ್ತಿರುವ ಶ್ರೀ ಮಹದೇಶ್ವರರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ತೆರಳಿ ವೀಕ್ಷಿಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಿಎಂ ಬಸವರಾಜು ಬೊಮ್ಮಾಯಿ ಅವರನ್ನು ಕರೆತಂದು ಪ್ರತಿಮೆ ಉದ್ಘಾಟಿಸಲು ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿಮೆ ನಿರ್ಮಾಣ ಕಾಮಗಾರಿ ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳ್ಳಬೇಕು. ಆದ್ದರಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪ ಕಾರ್ಯದರ್ಶಿ ಬಸವರಾಜು, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ನಿಶಾಂತ್, ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ಚೇತನ್ ಹಾಗೂ ಇನ್ನಿತರರು ಇದ್ದರು.