ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈ ಬಿಟ್ಟ ರೈತರು

22 HANUR 6
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಪಾದಯಾತ್ರೆಯ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಸಚಿವ ಸಂಪುಟ ಸಭೆಯಲ್ಲಿ ಮನವಿ ಸಲ್ಲಿಸುವುದಾಗಿ ನಿರ್ಧರಿಸಿದ್ದ ತಾಲೂಕು ರೈತ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಶಾಸಕ ಎಂ.ಆರ್. ಮಂಜುನಾಥ್ ಸಭೆ ನಡೆಸಿ ಪಾದಯಾತ್ರೆ ಕೈಗೊಳ್ಳದಂತೆ ಮನವೊಲಿಸಿದರು.

ಕ್ಷೇತ್ರದ ಜಲಾಶಯಗಳಿಗೆ ನೀರು ತುಂಬಿಸುವುದು, ಬಸ್ ಡಿಪೋ ಸ್ಥಾಪನೆ, ರಸ್ತೆಗಳ ಅಭಿವೃದ್ಧಿ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಿಕೆ, ಪಶು ಆಸ್ಪತ್ರೆಗಳಿಗೆ ವೈದ್ಯ, ಸಿಬ್ಬಂದಿ ನೇಮಕ, ಶಿಕ್ಷಕರ ಕೊರತೆ ನೀಗಿಸುವಿಕೆ, ಇಂಡಿಗನತ್ತ ಪ್ರಕರಣವನ್ನು ಕೈ ಬಿಡುವುದು, ಕಾಡಂಚಿನ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ಇನ್ನು ಹಲವು ಬೇಡಿಕೆಗಳನ್ನು ಈಡೇರಿಸುವ ಸಂಬಂಧ ತಾಲೂಕು ರೈತ ಸಂಘದ ಪದಾಧಿಕಾರಿಗಳು ಏ.23 ರಂದು ರಾಮಾಪುರದಿಂದ ಮ.ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಸಂಪುಟ ಸಭೆಯಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದ್ದರು.

ಈ ಹಿನ್ನೆಲೆ ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಪದಾಧಿಕಾರಿಗಳ ಹಾಗು ರೈತ ಮುಖಂಡರ ಸಭೆಯಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ನಮ್ಮೆಲ್ಲದ ಸೌಭಾಗ್ಯ. ರಾಜ್ಯದಲ್ಲೇ ವಿಸ್ತೀರ್ಣದಲ್ಲಿ 3ನೇ ಸ್ಥಾನವನ್ನು ಹೊಂದಿರುವ ಹನೂರು ಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈಗಾಗಲೇ ನಡೆದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗಾಗಿ ಹೆಚ್ಚಿನ ಅನುದಾನ ಸಿಗುವ ಭರವಸೆ ಇದೆ.

ಈಗಾಗಲೇ 44 ಕೋಟಿ ರೂ. ವೆಚ್ಚದಲ್ಲಿ ಮ.ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮಗಳಿಗೆ ಹಾಗೂ ಸೋಲಿಗರ ಹಾಡಿಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ಚಾಲನೆ ನೀಡಲಾಗಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಾಗೆಯೇ 82 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ 20 ಕೋಟಿ ರೂ. ಅನುದಾನ ದೊರಕಿದೆ. ಅಲ್ಲದೆ ಮ.ಬೆಟ್ಟದ ರಸ್ತೆಯನ್ನು 15 ಕೋಟಿ ರೂ. ಅನುದಾನದಲ್ಲಿ ಮರು ಡಾಂಬರೀಕರಣಗೊಳಿಸಲಾಗಿದೆ. ಬಂಡಳ್ಳಿ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ., ಕೊತ್ತನೂರು ರಸ್ತೆ ಸೇರದಂತೆ ಇನ್ನು ಕೆಲವು ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು.

ಇನ್ನು ಹುಬ್ಬೆಹುಣಸೆ, ರಾಮನಗುಡ್ಡೆ ಜಲಾಶಯದ ನೀರು ತುಂಬಿಸುವ ಪುನರ್ ಕಾಮಗಾರಿ ಹಾಗೂ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಲು 52 ಕೋಟಿ ರೂ. ಹಾಗೂ ಗುಂಡಾಲ್ ಜಲಾಶಯದ ಅಭಿವೃದ್ಧಿಗೆ ಪ್ರತ್ಯೇಕವಾಗಿ 80 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಕಂದಾಯ ಇಲಾಖೆಯಲ್ಲಿ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು. ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗವುದು. ಆದ್ದರಿಂದ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದರು. ಕೆಲ ಚರ್ಚೆಗಳ ಬಳಿಕ ರೈತರು ನಿರ್ಧರಿಸಿದ್ದ ಪಾದಯಾತ್ರೆಯನ್ನು ಹಿಂಪಡೆಯುವುದಾಗಿ ತಿಳಿಸಿದರು.

ಇದೇ ವೇಳೆ ಚಿರತೆ ಹಾವಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ ರೈತರಿಗೆ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರಸವೆ ನೀಡಿದರು.

ಸಭೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಆನಂದಮೂರ್ತಿ, ಚಿಕ್ಕರಾಜಶೆಟ್ಟಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಕಾರ್ಯದರ್ಶಿ ಗೋವಿಂದರಾಜು, ಮಹಿಳಾ ಸಂಘದ ಅಧ್ಯಕ್ಷೆ ರಾಜಮಣಿ, ಕಾರ್ಯದರ್ಶಿ ಪೂಂಗುಡಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net