

ಹನೂರು: ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಿರುವ ಶ್ರೀ ಮಹದೇಶ್ವರ ಪ್ರತಿಮೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುವಂತೆ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜು ನೇತೃತ್ವದಲ್ಲಿ ಭಾನುವಾರ ಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಯಿತು.
ಕೊಳ್ಳೇಗಾಲದ ಕಡೆಗೆ ತೆರಳುವ ಚೆಕ್‌ಪೋಸ್ಟ್‌ನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಇಲ್ಲಿನ ಅವ್ಯವಸ್ಥೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮ.ಬೆಟ್ಟದಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಹದೇಶ್ವರರ ಪ್ರತಿಮೆಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿ 6 ತಿಂಗಳು ಕಳೆದಿದೆ. ಆದರೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಚುನಾವಣೆ ಉದ್ದೇಶದಿಂದ ತರಾತುರಿಯಲ್ಲಿ ಪ್ರತಿಮೆ ಉದ್ಘಾಟಿಸಿದ್ದು, ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ಅಗತ್ಯ ಕ್ರಮಕೈಗೊಂಡು 15 ದಿನದೊಳಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುವ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೋಳಿಮೊಟ್ಟೆ ಹಾಗೂ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಭಾಗ್ಯರಾಜು ಎಚ್ಚರಿಸಿದರು.
ಮ.ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕೆಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಭಕ್ತರು ತೊಂದರೆ ಎದುರಿಸುವಂತಾಗಿದೆ. ದಾಸೋಹ ಭವನಕ್ಕೆ ಭಕ್ತರು ಗುಣಮಟ್ಟದ ಅಕ್ಕಿಯನ್ನು ನೀಡುತ್ತಿದ್ದರೂ ಪಡಿತರ ಅಕ್ಕಿಯಿಂದ ಪ್ರಸಾದ ತಯಾರಿಸಿ ಉಣ ಬಡಿಸಲಾಗುತ್ತಿದೆ. ಅಕ್ಕಿ, ತರಕಾರಿ ಹಾಗೂ ಇತರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಜತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುತ್ತಿಲ್ಲ. 4 ಶೌಚಗೃಹಗಳಿಗೆ ಬೀಗ ಹಾಕಲಾಗಿದೆ. ವಸತಿ ಗೃಹಗಳು ದೊರಕುತ್ತಿಲ್ಲ. ಇಲ್ಲಿನ ಅಧಿಕಾರಿಗಳು ಖಾಸಗಿ ವಸತಿ ಗೃಹಗಳ ಮಾಲೀಕರ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಭಕ್ತರಿಗೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಪ್ರತಿಭಟನಕಾರರ ಮನವಿ ಆಲಿಸಿ ಮಾತನಾಡಿ, ಅಧಿಕಾರ ವಹಿಸಿಕೊಂಡು 2 ದಿನವಾಗಿದೆ. ಹಾಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನ ಸೆಳೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ರೈತ ಮುಖಂಡರಾದ ಮಲೆಯೂರಿನ ಹರ್ಷ, ನಾಗರಾಜು, ಉಡಿಗಾಲದ ರೇವಣ್ಣ, ಮಹದೇವಸ್ವಾಮಿ, ಹಾಡ್ಯದ ರವಿ, ಕೆರೆಹುಂಡಿಯ ರಾಜಣ್ಣ, ಶಿವಣ್ಣ, ಹರವೆ ನಂದೀಶ್, ಸೋಮು, ಗುರುಮೂರ್ತಿ, ಮಂಜು, ನಾಗೇಂದ್ರ, ನಂಜುಂಡಸ್ವಾಮಿ ಇತರರು ಇದ್ದರು.