

ಕೂಡ್ಲಿಗಿ: ಶಿಕ್ಷಕರು ಸುಸ್ಥಿರ ಸಮಾಜದ ನಿರ್ಮಾತೃಗಳು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ತಾಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸರ್ವೇಪಲ್ಲಿ ರಾಧಾಕೃಷ್ಣನ್ 137 ನೇ ಜಯಂತಿ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಸಮಾಜದಲ್ಲಿ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಉತ್ತಮ ಶಿಕ್ಷಕರು ಸತ್ಪ್ರಜೆಗಳನ್ನು ನಿರ್ಮಿಸಲು ಸಾಧ್ಯ. ಜೀವಿತಾವಧಿಯಲ್ಲಿ ಎಲ್ಲರನ್ನೂ ಒಂದೊಂದು ಮಹತ್ತರ ಸಾಧನೆಗೆ ಪ್ರೇರೇಪಿಸಿ, ಯಶಸ್ಸಿಗೆ ಕಾರಣರಾಗಿ ತಾವು ಹಾಗೆಯೇ ಉಳಿಯುವ ಅದೇ ಸೇವೆಯಲ್ಲಿಯೇ ಶಿಕ್ಷಕರು ಮುಂದುವರಿಯುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರಿಗೆ ಚಿರಋಣಿಯಾಗಿರಬೇಕು ಎಂದರು.
ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಹೆಚ್ಚುವರಿ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿದ್ದೇನೆ. ತಾಲೂಕಿನಲ್ಲಿ ಗುರು ಭವನದ ಅವಶ್ಯವಿದ್ದು, ಅನುದಾನ ಒದಗಿಸಿದ್ದು, ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ಜತೆ ಮಾತನಾಡಿ ಗುರು ಭವನ ನಿರ್ಮಾಣಕ್ಕೆ ಮುಂದಾಗುವೆ ಎಂದು ತಿಳಿಸಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಉತ್ತಮ ಶಿಕ್ಷಕರನ್ನು ಸನ್ಮಾನ ಮಾಡಲಾಯಿತು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಬಿಇಒ ಎಸ್. ಎಸ್. ಜಗದೀಶ್, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ, ತಾಲೂಕು ಅಧ್ಯಕ್ಷ ಕೊಟ್ರಗೌಡ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ, ಟಿ.ಎಚ್.ಎಂ.ಶೇಖರಯ್ಯ, ಜಿಲಾನ್, ಗುನ್ನಳ್ಳಿ ರಾಘವೇಂದ್ರ, ನಾಗರಾಜ ಕೊಟ್ರಪ್ಪನವರ್ ಇತರರಿದ್ದರು.
ಇದಕ್ಕೂ ಮುನ್ನ ಪಟ್ಟಣದ ಮಹಾತ್ಮ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಸರ್ವೇಪಲ್ಲಿ ರಾಧಾಕೃಷ್ಣನ್ ಭಾವಚಿತ್ರದ ಮೆರವಣಿಗೆ ನಡೆಯಿತು.