ಮಹಜರು ಸ್ಥಳದ ಬಳಿ ಜನಜಂಗುಳಿ

Renuka
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾದ ನಗರದ ವಿಆರ್‌ಎಸ್ ಬಡಾವಣೆ ನಿವಾಸಿ ರೇಣುಕಸ್ವಾಮಿ ಪ್ರಕರಣ ಸಂಬಂಧ ನಾಲ್ವರು ಆರೋಪಿತರನ್ನು ಮಹಜರು ಸ್ಥಳಕ್ಕೆ ಕರೆತರುವ ವಿಚಾರ ತಿಳಿದು ಗುರುವಾರ ಬೆಳಗ್ಗೆಯಿಂದಲೇ ಅನೇಕರು ಕಾಯುತ್ತ ನಿಂತಿದ್ದರು.

ಬೆಂಗಳೂರಿನ ತನಿಖಾಧಿಕಾರಿಗಳ ತಂಡ ನಗರದ ಚಳ್ಳಕೆರೆ ಗೇಟ್ ಸಮೀಪದ ಬಾಲಾಜಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಮಹಜರು ನಡೆಸುವ ಸಂಗತಿ ಹರಡುತ್ತಿದ್ದಂತೆ ಸ್ಥಳದತ್ತ ದೌಡಾಯಿಸುವವರ ಸಂಖ್ಯೆ ಹೆಚ್ಚಾಯಿತು.

ಬೆಳಗ್ಗೆ 10.30ಕ್ಕೆ, ಮಧ್ಯಾಹ್ನ 2ಕ್ಕೆ, ಸಂಜೆ 5ಕ್ಕೆ, 6 ಗಂಟೆಗೆ ಬರಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳದತ್ತ ಬರುವುದು, ಪುನಾಃ ಹಿಂದಿರುಗುವಲ್ಲಿ ನಿರತರಾದರು. ಆದರೆ, ಸಂಜೆ 6ರ ಬಳಿಕ ಸೇರಿದ್ದ ಜನಜಂಗುಳಿ ಕದಲಲಿಲ್ಲ.

ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗ, ಸರ್ವೀಸ್ ರಸ್ತೆ ಬದಿಯಲ್ಲಿ ಬೆಂಗಳೂರಿನ ಪೊಲೀಸರ ಬರುವಿಕೆಗಾಗಿ ಸಾಲುಗಟ್ಟಿ ನಿಂತಿದ್ದರು. ತಮ್ಮ ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಚಳ್ಳಕೆರೆ ಗೇಟ್ ಸಮೀಪ ಜಮಾಯಿಸಿದ ದೃಶ್ಯ ಕಂಡು ಬಂದಿತು.

ಕಿಕ್ಕಿರಿದು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಮಹಜರು ವೇಳೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ತಡೆಯಲು ಚಿತ್ರದುರ್ಗ ಪೊಲೀಸರು ಅಗತ್ಯ ಬಂದೋಬಸ್ತ್‌ಗೆ ಸಿದ್ಧತೆ ಮಾಡಿಕೊಂಡಿದ್ದರು.

ಕೊಲೆ ಪ್ರಕರಣದಲ್ಲಿ ಕಿಡ್ನಾಪ್ ನಡೆದಿದ್ದು, ಯಾವ ಸ್ಥಳದಿಂದ. ರೇಣುಕಸ್ವಾಮಿ ಅವರನ್ನು ಹೇಗೆ ಅಪಹರಿಸಿದರು. ಈ ವೇಳೆ ಯಾರೆಲ್ಲ ಭಾಗಿಯಾಗಿದ್ದರು. ಇನ್ನಿತರೆ ವಿಚಾರ ತಿಳಿಯಲು ತನಿಖಾಧಿಕಾರಿಗಳು ನಡೆಸುವ ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ವೀಕ್ಷಿಸಲು ಸ್ಥಳದಲ್ಲಿದ್ದ ಜನರ ಕುತೂಹಲ ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಲೇ ಇತ್ತು.

ಆರೋಪ ಎದುರಿಸುತ್ತಿರುವ ಕೋಳಿಬುರುಜನಹಟ್ಟಿಯ ರಾಘವೇಂದ್ರ ಆಲಿಯಾಸ್ ರಘು ಗ್ಯಾಂಗ್ ಅನ್ನು ಜತೆಗೆ ಕರೆದುಕೊಂಡು ಬರಲಿದ್ದಾರೆ ಎಂಬ ಮಾಹಿತಿಯಿಂದಾಗಿಯೂ ರಘು ಹೊರತುಪಡಿಸಿ, ಇನ್ನುಳಿದ ಆರೋಪಿತರ್ಯಾರು ಎಂಬುದನ್ನು ತಿಳಿಯಲು ಹಲವರು ಅಲ್ಲಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net