ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ನನೆಗುದಿಗೆ

30cmy4
Published on

ಚಿಂತಾಮಣಿ: ತಾಲೂಕಿನ ಮಸ್ತೇನಹಳ್ಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಿ 8 ವರ್ಷಗಳೇ ಕಳೆದರೂ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಭೂಮಿಪೂಜೆಯಲ್ಲಿಯೇ ನಿಂತಿದೆ!. ಬಯಲುಸೀಮೆಯ ಜನರಿಗೆ ಉದ್ಯೋಗದ ಕನಸು ಬಿತ್ತಿದ್ದ ಮಹತ್ವಾಕಾಂಕ್ಷಿ ಯೋಜನೆ ಆರಂಭದಲ್ಲೇ ಕಮರಿ ಹೋದಂತಾಗಿದೆ.

ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ತಾಲೂಕಿನ ಕೈವಾರ ಹೋಬಳಿ ಮಸ್ತೇನಹಳ್ಳಿಯಲ್ಲಿ 516.39 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಿಸುವ ಯೋಜನೆ ರೂಪಿಸಿ ಜಾಗ ಗುರುತಿಸಿ 8 ವರ್ಷಗಳೇ ಕಳೆದಿವೆ, 2018ರ ವಿಧಾನಸಭಾ ಚುನಾವಣೆಗೂ ಮುನ್ನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಹ ನೆರವೇರಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕಾಮಗಾರಿಗಳು ಪ್ರಾರಂಭವಾಗಿಲ್ಲ.

ಇದಕ್ಕೂ ಮುನ್ನ ಚೇಳೂರು ರಸ್ತೆ ಕನಿಶೆಟ್ಟಿಹಳ್ಳಿಯಲ್ಲಿ 800 ಎಕರೆ ಜಾಗ ಗುರುತಿಸಲಾಗಿದ್ದು, ಅದರತ್ತ ಯಾರು ತಿರುಗಿಯೂ ನೋಡಿಲ್ಲ!. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಜಮೀನು ಬಿಟ್ಟುಕೊಟ್ಟವರಿಗೆ ಹಣ ಬಿಡುಗಡೆಯಾಗದ ಹಿನ್ನಲೆಯಲ್ಲಿ ರೈತರು ಜಮೀನು ನೀಡಲು ಹಿಂದುಮುಂದು ನೋಡುತ್ತಿದ್ದರೆ, ಮೂಲಸೌಲಭ್ಯಗಳನ್ನು ಒದಗಿಸಲು ಅನುದಾನ ಬಾರದ ಹಿನ್ನೆಲೆಯಲ್ಲಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ.

ಕಾಮಗಾರಿಗಳು ಪೂರ್ಣಗೊಳ್ಳುವುದಾದರೂ ಯಾವಾಗ ಎಂಬ ಪ್ರಶ್ನೆ ಪ್ರತಿಧ್ವನಿಸುತ್ತಿದ್ದರೆ, ಕೈಗಾರಿಕೆಗಳು ಸ್ಥಾಪನೆಯಾಗುತ್ತವೆಯೇ? ಕೆಲಸ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನದ ಅಸಮಾಧಾನ ತಣ್ಣಗೆ ಸದ್ದುಮಾಡುತ್ತಿದೆ. ಇದೆಲ್ಲದರ ನಡುವೆಯೂ ಕೆಲಸದ ನಿರೀಕ್ಷೆಯಲ್ಲಿರುವ ತಾಲೂಕಿನ ಜನರು ಕೈಗಾರಿಕೆಗಳು ಶೀಘ್ರವೇ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ!

ಕಾಮಗಾರಿ ಪ್ರಾರಂಭಕ್ಕೆ ಮೀನಮೇಷ : ನಿರಂತರ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸರ್ಕಾರ ಮಸ್ತೇನಹಳ್ಳಿ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಅಂತಿಮ ಅಧಿಸೂಚನೆಯನ್ನು (ಅಧಿಸೂಚನೆ ಸಂಖ್ಯೆ: ಸಿಐ168 ಎಸ್‌ಪಿಕ್ಯೂ 2011 ದಿನಾಂಕ 26-05-2012) ಹೊರಡಿಸಿದೆ. ಅದರಂತೆ ರೈತರ ಪ್ರತಿ ಎಕರೆಗೆ 19.5 ಲಕ್ಷ ರೂ.ಪರಿಹಾರ ನಿಗದಿಪಡಿಸಲಾಗಿದೆ. ಕನಿಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಪ್ರಾಥಮಿಕ ಅಧಿಸೂಚನೆ (ಸಿಇ 233 ಎಸ್‌ಪಿಕ್ಯೂ 2011 ದಿನಾಂಕ 24-04-2010) ಹೊರಡಿಸಿತ್ತು. 2013ರಲ್ಲಿ ರಸ್ತೆ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೈಗಾರಿಕೆಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ, ಕಾಮಗಾರಿಗಳ ಪ್ರಾರಂಭಕ್ಕೆ ಮೀನಮೇಷ ಎಣಿಸುತ್ತಿರುವುದರಿಂದ ಯೋಜನೆ ಯಶಸ್ವಿಗೆ ಹಿನ್ನಡೆಯಾಗಿದೆ.

ಬಂಡವಾಳವೇ ಹೂಡಿಕೆಯಾಗಿಲ್ಲ! : ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶ 700.75 ಎಕರೆ ವಿಸ್ತೀರ್ಣ ಹೊಂದಿದ್ದು, ಈಗಾಗಲೇ 998 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 1,835 ಉದ್ಯೋಗ ಸೃಷ್ಟಿಯಾಗಿದೆ, ಇನ್ನು ವೇಮಗಲ್ ಕೈಗಾರಿಕಾ ಪ್ರದೇಶ 666.41 ಎಕರೆ ವಿಸ್ತಿರ್ಣವಿದ್ದು ಈಗಾಗಲೇ 2,856.8 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 12,886 ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ ಎಂಬ ಮಾಹಿತಿಯಿದೆ. ಆದರೆ ಮಸ್ತೇನಹಳ್ಳಿ ಮತ್ತು ಕನಿಶೆಟ್ಟಿಹಳ್ಳಿಯಲ್ಲಿ ಕೈಗಾರಿಕಾಭಿವೃದ್ಧಿಗೆ ಸಾಕಷ್ಟು ಭೂಮಿ ಇದ್ದರೂ ಬಂಡವಾಳವೇ ಹೂಡಿಕೆಯಾಗಿಲ್ಲ. ಈಗಲಾದರೂ ಅಭಿವೃದ್ಧಿ ಮೂಲಕ ವಾಣಿಜ್ಯ ನಗರಿಗೆ ಹೊಸ ಸ್ಪರ್ಶ ನೀಡಬೇಕಾಗಿದೆ.

ಎರಡನೇ ಹಂತದಲ್ಲಿ ಎಕರೆಗೆ 35 ಲಕ್ಷ ರೂ. ಪರಿಹಾರ ನೀಡುವಂತೆ ಕೆಲವರು ಪಟ್ಟುಹಿಡಿದು ಭೂಮಿ ಬಿಟ್ಟುಕೊಂಡಲು ಹಿಂದೇಟು ಹಾಕಿದ್ದರು, ಇವರಲ್ಲೇ ಕೆಲವರು 19.5 ಲಕ್ಷ ರೂ. ಪರಿಹಾರ ಪಡೆದಿದ್ದಾರೆ. ಉಳಿದವರ ಮನವೊಲಿಸಲಾಗುತ್ತಿದೆ, ಕರೊನಾ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಅನುದಾನ ಬಾರದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದು, ಸದ್ಯದಲ್ಲೇ ಅನುದಾನ ಬಿಡುಗಡೆಯಾಗಲಿದೆ.

ಎಂ.ಕೃಷ್ಣಾರೆಡ್ಡಿ, ಶಾಸಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net