

ಹಾಸನ: ನಗರದ ಶರೀಫ್ ಕಾಲೋನಿಯಲ್ಲಿರುವ ಖೂಬಾ ಮಸೀದಿಯಲ್ಲಿ ಕಳ್ಳತನಕ್ಕೆ ಯತ್ನಸಿ ವಿಫಲವಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ವ್ಯಕ್ತಿಯೋಬ್ಬ ಮುಖಕ್ಕೆ ಪಂಚೆ ಕಟ್ಟಿಕೊಂಡು ತಡರಾತ್ರಿ 1.30 ರ ಸಮಯದಲ್ಲಿ ಮಸೀದಿಗೆ ನುಗ್ಗಿ, ಮಸೀದಿಯಲ್ಲಿದ್ದ ಹುಂಡಿ ಮೇಲೆ ಸೈಜ್‌ಕಲ್ಲು ಎತ್ತಿಹಾಕಿ ಹಣ ದೋಚಲು ಕಸರತ್ತು ಮಾಡಿದ್ದಾನೆ. ಒಂದಲ್ಲ, ಐದಾರು ಬಾರಿ ಹುಂಡಿ ಮೇಲೆ ಸೈಜ್ ಕಲ್ಲು ಎತ್ತಿಹಾಕಿ ಹಣ ಕದಿಯಲು ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ.
ಹುಂಡಿ ಮೇಲೆ ಕಲ್ಲು ಎತ್ತಿಹಾಕುವ ಶಬ್ದ ಕೇಳಿ ಎಚ್ಚರಗೊಂಡ, ಮಸೀದಿಯಲ್ಲೇ ಮಲಗಿದ್ದ ಎರಡನೇ ಗುರುಗಳು ಏನು ನಡೆಯುತ್ತಿದೆ ಎಂದು ಓಡಿ ಬಂದಿದ್ದಾರೆ. ಈ ವೇಳೆ ತನ್ನ ಕೃತ್ಯ ಬಯಲಾಗಿ ಎಲ್ಲಿ ಸಿಕ್ಕಿ ಬೀಳುವೆನೋ ಎಂಬ ಭಯದಿಂದ ಖದೀಮ ರಾಡ್‌ನಿಂದ ಗುರುಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಮಸೀದಿಯ ಕಾಂಪೌಂಡ್ ಹಾರಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾನೆ.
ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದೇ ಮಸೀದಿಯಲ್ಲಿ ಕಳೆದ ಒಂದುಕಾಲು ವರ್ಷದ ಅಂತರದಲ್ಲಿ ನಾಲ್ಕನೇ ಬಾರಿ ನಡೆದಿರುವ ಪ್ರಕರಣ ಇದಾಗಿದೆ. ಸುದ್ದಿ ತಿಳಿದು ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.