ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದವನ ಬಂಧನ

ಮಸೀದಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದವನ ಬಂಧನ
Published on

ಹಾಸನ: ಮಸೀದಿಯನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿ, ಆತನಿಂದ 5.35 ಲಕ್ಷ ಬೆಲೆಬಾಳುವ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ವಿರಾಜಪೇಟೆಯ ಸುನ್ನತ್ ಬೀದಿಯ ಮೊಹಮ್ಮದ್ ಸುಹೇಬ್ (35) ಎಂಬ ಆರೋಪಿ ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ಒಟ್ಟು ಎಂಟು ಮಸೀದಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದನು. ಅರಸೀಕೆರೆ ನಗರ ಠಾಣೆಯ ಇನ್ಸ್‌ಪೆಕ್ಟರ್ ಗಂಗಾಧರ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಭಾನುವಾರ ಬೆಳಗ್ಗೆ 6 ಸಮಯದಲ್ಲಿ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಈತನನ್ನ ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.

ಆರೋಪಿ ಮೈಸೂರು ಜಿಲ್ಲೆಯ ಇಲವಾಲ, ಬಿಳಿಕೆರೆ, ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಹಾಸನ ನಗರ, ಗಂಡಸಿ, ಅರಸೀಕೆರೆ ಮಸೀದಿ ಮತ್ತು ದರ್ಗಾಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಸೌಂಡ್ ಸಿಸ್ಟಮ್, ಕಂಪ್ಯೂಟರ್, ಮಾನಿಟರ್, ಸ್ಪೀಕರ್, ಹೋಂ ಥಿಯೇಟರ್ ಸೇರಿದಂತೆ ಕ್ಯಾಮೆರಾಗಳನ್ನು ಕದ್ದು ಮಾರಾಟ ಮಾಡುತ್ತಿದ್ದನು. ಕದ್ದಂತಹ ಎಲ್ಲ ವಸ್ತುಗಳನ್ನು ಶ್ರೀರಂಗಪಟ್ಟಣದ ಒಂದು ಮನೆಯಲ್ಲಿ ಸಂಗ್ರಹಿಸಿ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಾಡುತ್ತಿದ್ದನು. ಇದೀಗ ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಲಯಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.

ಈ ಪ್ರಕರಣವನ್ನು ಭೇದಿಸಿದ ತಂಡಕ್ಕೆ 5000 ನಗದು ಬಹುಮಾನವನ್ನು ಘೋಷಿಸಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net