ಮಸೀದಿ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಒತ್ತಾಯ

28 ckm 2
ಚಿಕ್ಕಮಗಳೂರು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ತಾಜ್‌ರಾನ್ ಮಸೀದಿಯ ಅಧಿಕಾರ ಸೂಕ್ತ ಸಮಯಕ್ಕೆ ವರ್ಗಾವಣೆ ಮಾಡದೇ ಹುನ್ನಾರ ನಡೆಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಬ್ದುಲ್ ಶಕೀಲ್, ಮಹಮ್ಮದ್ ಯೂಸೂಫ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ನಗರದ ತಾಜ್‌ರಾನ್ ಮಸೀದಿಯ ಅಧಿಕಾರ ಸೂಕ್ತ ಸಮಯಕ್ಕೆ ವರ್ಗಾವಣೆ ಮಾಡದೇ ಹುನ್ನಾರ ನಡೆಸುತ್ತಿರುವ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹಮ್ಮದ್ ಮಂಗಳವಾರ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಮಸೀದಿ ಅಧ್ಯಕ್ಷರು ಸಮಯಕ್ಕೆ ಸರಿಯಾಗಿ ಅಧಿಕಾರ ವರ್ಗಾವಣೆ ಮಾಡಿಲ್ಲ. ಇವರೊಟ್ಟಿಗೆ ವಕ್ಫ್ ಅಧಿಕಾರಿಗಳು ಶಾಮೀಲಾಗಿ ಬೆಂಬಲ ಸೂಚಿಸಿದ್ದು ಕಾಲ ಕಾಲಕ್ಕೆ ನಡೆಯ ಬೇಕಾಗಿದ್ದ ಚುನಾವಣೆಯನ್ನು ನಡೆಸದೇ ಎರಡು ದಶಕಗಳಿಂದ ಸದಸ್ಯತ್ವ ನೀಡದೇ, ಲೆಕ್ಕ ಪರಿಶೀಲನೆ ನಡೆಸದೇ ಇಚ್ಚಾನುಸಾರ ಲೆಕ್ಕ ಪತ್ರಗಳನ್ನು ಗೀಚಿ, ದ್ರೋಹವೆಸಗುತ್ತಿದ್ದಾರೆ ಎಂದು ದೂರಿದರು.

ಮಸೀದಿ ಅಧ್ಯಕ್ಷರು ಮತ್ತು ವಕ್ಫ್ ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಸಂಸ್ಥೆಯ ಸ್ವತ್ತನ್ನು ಮೇಲಾಧಿಕಾರಿಗಳ ಅನುಮತಿ ಪಡೆಯದೇ ಸ್ವಂತ ಲಾಭಕ್ಕಾಗಿ ಕಾನೂನು ಬಾಹಿರವಾಗಿ ಬಾಡಿಗೆ ನೀಡಿದ್ದು, ರಾಜ್ಯ ವಕ್ಫ್ ಬೋರ್ಡ್ ಶೋಕಾಸ್ ನೋಟಿಸ್ ನೀಡಿದೆ ಎಂದು ತಿಳಿಸಿದರು.

ಈ ನಡುವೆಯು ವಕ್ಫ್ ಅಧಿಕಾರಿ ಪ್ರಭಾವ ಬಳಸಿ ಕಾನೂನು ಬಾಹಿರ ಕೃತ್ಯವನ್ನು ಮುಂದುವರೆಸಿ ಕೊಂಡು ಹೋಗಿರುತ್ತಾರೆ. ಅಲ್ಲದೇ ಮಸೀದಿ, ಶಾದಿಮಹಲ್‌ನಿಂದ ಮಾಸಿಕ ಲಕ್ಷಾಂತರ ಆದಾಯವಿದ್ದು ಲೆಕ್ಕಪತ್ರ ಮಾಡದೇ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವ ಅನುಮಾನ ಸಾರ್ವಜನಿಕರಲ್ಲಿ ಸೃಷ್ಟಿಯಾಗುತ್ತಿದೆ ಎಂದು ದೂರಿದರು.

ನಗರದಲ್ಲಿ ಪುರುಷ, ಮಹಿಳೆಯರು ಸೇರಿದಂತೆ ಒಟ್ಟು ೩೮ ಸಾವಿರ ಮುಸ್ಲಿಂ ಜನಸಂಖ್ಯೆಯಿದೆ. ಈ ಪೈಕಿ ಕೇವಲ ೧೬೭ ಜನರನ್ನು ಮಾತ್ರ ಸದಸ್ಯರನ್ನಾಗಿ ಮಾಡಿಕೊಂಡು ಚುನಾವಣೆ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ. ಮಸೀದಿ ಅಧ್ಯಕ್ಷರು, ವಕ್ಫ್ ಅಧಿಕಾರಿ ಗುಪ್ತವಾಗಿ ಸಾಮಾನ್ಯ ಸಭೆ ನಡೆಸಿ ಗೌಪ್ಯವಾಗಿ ಚುನಾವಣೆ ನಡೆಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಸೀದಿ ಮಾಜಿ ಸದಸ್ಯರಾದ ಅಬ್ದುಲ್ ಶಕೀಲ್, ಮಹಮ್ಮದ್ ಯುಸೂಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net