ಮಸೀದಿ, ಅಲ್ಲಮಪ್ರಭುಗೆ ನೋಟಿಸ್ ನೀಡಿ

ANDOLAN SREEE PHOTO (1)
Published on

ಕಲಬುರಗಿ: ನಗರದಲ್ಲಿ ಕೋರಣೇಶ್ವರ ಶಾಖಾ ಮಠದ ಕಟ್ಟಡ ನಿಯಮ ಬಾಹಿರವಾಗಿ ನಿರ್ಮಿಸಲಾಗಿದೆ ಎಂದು ನೋಟಿಸ್ ಕೊಡಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಮ್ ಇದ್ದರೆ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನಿಯಮ ಮೀರಿ ನಿರ್ಮಿಸಿರುವ ಕಟ್ಟಡವನ್ನು ಡೆಮಾಲಿಷ್ ಮಾಡಲಿ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸವಾಲು ಹಾಕಿದರು.
`ಶಾಖಾ ಮಠದ ಕಟ್ಟಡ ನಿಯಮಬಾಹಿರ ಎಂಬುದು ಗಮನಕ್ಕೆ ಬಂದಿದ್ದಕ್ಕೆ ನೋಟಿಸ್ ನೀಡಲಾಗಿದೆ. ಅದರಲ್ಲಿ ತಪ್ಪೇನಿದೆ. ಬೇರೆ ಕಡೆ ಆ ರೀತಿ ಇದ್ದರೆ ಮಾಹಿತಿ ಕೊಡಿ' ಎಂದು ಸಚಿವರು ಕೇಳಿದ್ದಾರೆ. ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ, ಶಾಂತಿ ನಗರದಲ್ಲಿನ ಮನೆ, ಜನರು ಓಡಾಡದಂತೆ ಸೂಪರ್ ಮಾರ್ಕೆಟ್‌ನಲ್ಲಿ ನಿರ್ಮಿಸಿರುವ ಮೈಬಾಜ್ ಮಸೀದಿ ಸೆಟ್‌ಬ್ಯಾಕ್ ಇದೆ, ವಾಹೀಜ್ ಬಾಬಾ ಒಂದು ಎಕರೆ ಜಮೀನು ಅತಿಕ್ರಮ ಸಚಿವರ ಕಣ್ಣಿಗೆ ಕಾಣುತ್ತಿಲ್ಲವೇ? ತಾಕತ್ತಿದ್ದರೆ ನೋಟಿಸ್ ನೀಡಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಮನೆ ದಾಖಲೆ ಪಾಲಿಕೆಗೆ ಆರ್‌ಟಿಐ ಮೂಲಕ ಕೇಳಲಾಗಿದೆ. ಈ ಹಿಂದೆ ಕರ್ನಾಟಕ ಪೀಪಲ್ಸ್ ಎಜ್ಯುಕೇಶನ್ ಸಂಸ್ಥೆಯ ಸ್ಥಳದ ನೀಲನಕ್ಷೆ ಕೇಳಿದ್ದಕ್ಕೆ ಕಚೇರಿಯಲ್ಲಿ ಕಡತ ಲಭ್ಯವಿಲ್ಲ ಎಂದು ಪಾಲಿಕೆಯವರು ಉತ್ತರಿಸಿದ್ದಾರೆ. ದಾಖಲೆ ಕಳೆದಿದ್ದು ಅಕ್ರಮ ಎಂದು ಆರೋಪಿಸಿದರು.
ಸಚಿವರಿಗೆ ಕನಿಷ್ಠ ಮಾಹಿತಿ ಇಲ್ಲ: ಸೆಟ್‌ಬ್ಯಾಕ್ ಆರೋಪದಲ್ಲಿ ಶಾಖಾ ಮಠಕ್ಕೆ ಡೆಮಾಲಿಷನ್ ಮಾಡುವ ನೋಟಿಸ್ ನೀಡಿದ್ದಾರೆ. ಆದರೆ ಉಸ್ತುವಾರಿ ಸಚಿವರಿಗೆ ಕನಿಷ್ಠ ನಿಯಮಗಳ ಅರಿವು ಇಲ್ಲ. ಸೆಟ್‌ಬ್ಯಾಕ್ ಕಂಡು ಬಂದರೆ ದಂಡವಿಧಿಸಬೇಕು. ಹೆಚ್ಚಿನ ಮಾಹಿತಿ ಬೇಕಿದ್ದರೆ ನಗರಾಭಿವೃದ್ಧಿ ಸಚಿವ ರಹೀಂಖಾನ್ ಅವರಿಗೆ ಕೇಳಿ ಎಂದು ಸಲಹೆ ನೀಡಿದರು.
ಮಣಿಪುರಕ್ಕೆ ಹೋಗಲು ಶಕ್ತಿಯಿಲ್ಲ: ಬಾಂಗ್ಲಾ ಹಿಂದುಗಳ ರಕ್ಷಣೆಗೆ ಮನವಿ ಮಾಡಿದರೆ ಮಣಿಪುರಕ್ಕೆ ಹೋಗಿ ಎನ್ನುತ್ತಾರೆ. ನಮಗೆ ಅಲ್ಲಿಗೆ ಹೋಗಲು ಶಕ್ತಿ ಇಲ್ಲ. ಸಚಿವರು ಅವರ ಆಪ್ತ ಕಾರ್ಯದರ್ಶಿ ಅಮೆರಿಕಾ, ಬ್ರಿಟನ್ ತಿರುಗಾಡಿ ಬರ್ತಾರೆ. ಯಾರೋ ಟಿಕೆಟ್ ತೆಗೆಸುತ್ತಾರೆ. ನಾವೆಲ್ಲಿ ಹೋಗೋಣ. ಸಚಿವರು ರಾಜ್ಯದ ಕೋಲಾರ, ಹಿರೇಕೆರೂರಿನಲ್ಲಿ ಮುಸ್ಲಿಮರಿಂದ ಸಂಕಷ್ಟಕ್ಕೆ ಸಿಲುಕಿರುವ ದಲಿತರ ಮನೆಗೆ ಹೋಗಲಿ. ನಾವು ಇದ್ದ ಸ್ಥಳದಿಂದಲೇ ಹೋರಾಡುತ್ತೇವೆ ಎಂದು ಹೇಳಿದರು.
ಹುಲ್ಲೇಶ ಕಾಸರಬೋಸಗಾ, ಮಲ್ಕಣ್ಣ ಪೂಜಾರಿ, ಅಮರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net