

ಹಾಸನ: ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಹಾನಿಯುಂಟಾದ ಸ್ಥಳಗಳಿಗೆ ಶಾಸಕ ಎಚ್.ಪಿ. ಸ್ವರೂಪ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುವೆಂಪುನಗರ, ಉದಯಗಿರಿ, ಹೊಯ್ಸಳ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಯಾಗಿದ್ದವು. ಪರಿಶೀಲನೆ ವೇಳೆ ಮನೆ ಮಾಲೀಕರು ಶಾಸಕರ ಎದುರು ತಮ್ಮ ಅಳಲು ತೋಡಿಕೊಂಡರು.
ಕೆಲವೆಡೆ ರಾಜ ಕಾಲುವೆಗಳು ತುಂಬಿ ಉಕ್ಕಿ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳು ಕೂಡ ನೀರಿನಲ್ಲಿ ಮುಳುಗಿದ್ದು ಸ್ಥಳೀಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ಮಾತನಾಡಿ, ಬಡಾವಣೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಮನೆಯ ತುಂಬೆಲ್ಲಾ ನೀರು ತುಂಬಿಕೊಂಡಿತು. ರಾತ್ರಿಯಿಡೀ ನೀರನ್ನು ಹೊರ ಹಾಕುವ ಕೆಲಸ ಮಾಡಿದ್ದೇವೆ. ಈ ಹಿಂದೆಯೇ ಇಲ್ಲಿನ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ ಕಾಲುವೆಗಳ ತುಂಬೆಲ್ಲಾ ಮಣ್ಣು ತುಂಬಿಕೊಂಡಿರುವ ಪರಿಣಾಮ ಈ ಸಮಸ್ಯೆ ಉಲ್ಭಣಗೊಂಡಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಕೂಡಲೇ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಕೆಲವೆಡೆ ಮ್ಯಾನ್ ಹೋಲ್‌ಗಳು ಕೂಡ ತುಂಬಿ ಹರಿಯುತ್ತಿವೆ. ಈ ಎಲ್ಲಾ ಸಂಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಬಳಿಕ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ನಗರದ ವಿವಿಧೆಡೆ ನೆನ್ನೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಹೂಳು ತುಂಬಿಕೊಂಡಿರುವ ರಾಜಕಾಲುವೆ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆ ಹಾಗೂ ಕಾಲುವೆಗಳ ಅಂತರ ಕಡಿಮೆ ಮಾಡಿರುವುದು ಇದಕ್ಕೆಲ್ಲ ಕಾರಣ ಎಂಬುದು ತಿಳಿದು ಬಂದಿದ್ದು ಅವುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.