

ಹನೂರು: ತಾಲೂಕಿನಲ್ಲಿ 20 ದಿನಗಳಿಂದ ಮಳೆ ಬೀಳದ ಪರಿಣಾಮ ಜಮೀನುಗಳಲ್ಲಿ ರಾಗಿ ಹಾಗೂ ಮುಸುಕಿನ ಜೋಳದ ಪೈರುಗಳು ಒಂದೆಡೆ ಒಣಗುತ್ತಿದ್ದರೆ, ಇತ್ತ ಬಹುತೇಕ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗಾಗಿ ಕಾದುಕುಳಿತು ಚಿಂತಾಕ್ರಾಂತರಾಗಿದ್ದಾರೆ.
ಹನೂರು ಭಾಗದ ಬಹುತೇಕ ಜಮೀನು ಖುಷ್ಕಿ ಪ್ರದೇಶದಿಂದ ಕೂಡಿದ್ದು, ಮುಖ್ಯವಾಗಿ ಮಳೆ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಮುಂಗಾರಿನಲ್ಲಿ ಹೆಚ್ಚಾಗಿ ರಾಗಿ, ಮುಸುಕಿನ ಜೋಳ ಹಾಗೂ ನೆಲಗಡಲೆ ಬೆಳೆಯುತ್ತಾರೆ. ಕಳೆದ ವರ್ಷ ಇಷ್ಟೊತ್ತಿಗಾಗಲೇ ಉತ್ತಮ ಮಳೆಯಾಗಿ ಪೈರುಗಳು ಹುಲುಸಾಗಿ ಬೆಳೆದಿದ್ದವು.
ಈ ಬಾರಿ ಆಗಾಗ್ಗೆ ಸಾಧಾರಣಾ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಪಾಳು ಬಿಟ್ಟಿದ್ದ ಜಮೀನನ್ನು ಉಳುಮೆ ಮಾಡಿಸಿ ಬಿತ್ತನೆಗಾಗಿ ಹದಗೊಳಿಸಿದ್ದರು. 20 ದಿನದ ಹಿಂದೆ ಮೂರ‌್ನಾಲ್ಕು ದಿನ ಬಿತ್ತನೆಗೆ ಅನುಕೂಲವಾಗುವಂತೆ ಮಳೆಯಾದ ಹಿನ್ನೆಲೆಯಲ್ಲಿ ಕೆಲವು ರೈತರು ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಕೆಲವೆಡೆ ಪೈರುಗಳು ಬಂದಿವೆ. ಆದರೆ ಆ.11ರ ಬಳಿಕ ಮಳೆ ಬೀಳದ ಪರಿಣಾಮ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗುತ್ತಿವೆ. ಇನ್ನೂ ಕೆಲವೆಡೆ ಬಿತ್ತನೆ ಬೀಜ ನೆಲಕಚ್ಚಿರುವುದರಿಂದ ಸಾವಿರಾರು ರೂ. ವ್ಯಯಿಸಿ ಬಿತ್ತನೆ ಮಾಡಿರುವ ರೈತರಿಗೆ ನಷ್ಟದ ಆತಂಕ ಎದುರಾಗಿದೆ. ಈ ವಾರದಲ್ಲಿ ಮಳೆಯಾಗದಿದ್ದಲ್ಲಿ ಕೃಷಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ.
ಸೊರಗುತ್ತಿರುವ ಪೈರುಗಳು: ತಾಲೂಕಿನಲ್ಲಿ ನೀರಾವರಿ ಹಾಗೂ ಮಳೆಯಾಶ್ರಿತ ಸೇರಿದಂತೆ ಒಟ್ಟು 33,584 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಇಲಾಖೆ ಈ ಮುಂಗಾರಿನಲ್ಲಿ ನಿರ್ದಿಷ್ಟ ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ 13,050 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡುವ ಗುರಿ ಹೊಂದಿಲಾಗಿದ್ದು, ಈಗಾಗಲೇ 3,230 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಮುಸುಕಿನ ಜೋಳದ 11,450 ಹೆಕ್ಟೇರ್‌ನಲ್ಲಿ 420 ಹೆಕ್ಟೇರ್ ಹಾಗೂ ನೆಲಗಡಲೆಯ 255 ಹೆಕ್ಟೇರ್‌ನಲ್ಲಿ 56 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಕೆಲವು ಕಡೆಗಳಲ್ಲಿ ಬಂದಿರುವ ಪೈರುಗಳು ಮಳೆಯಿಲ್ಲದೆ ಸೋರಗುತ್ತಿವೆ. ಇತ್ತ ಬಿತ್ತನೆ ಮಾಡಿದ ಮುಸುಕಿನ ಜೋಳ ನೆಲದಲ್ಲಿಯೇ ಅದುಮಿ ಹೋಗಿದೆ. ಇದರಿಂದ ರೈತರಲ್ಲಿ ಚಿಂತೆ ಮನೆ ಮಾಡಿದ್ದು, ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ.
ಕೃಪೆ ತೋರುವನೇ ವರುಣ?: ತಾಲೂಕಿನ ರಾಮಾಪುರ, ಲೊಕ್ಕನಹಳ್ಳಿ ಹಾಗೂ ಹನೂರು ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರಗಳಿದ್ದು, ಈಗಾಗಲೇ ರೈತರಿಗೆ ಅಗತ್ಯ ಬಿತ್ತನೆ ಬೀಜ ವಿತರಿಸಲಾಗಿದೆ. ಇದರಲ್ಲಿ 210 ಕ್ವಿಂಟಾಲ್ ರಾಗಿ, 144 ಕ್ವಿಂಟಾಲ್ ಮುಸುಕಿನ ಜೋಳ ಹಾಗೂ 112 ಕ್ವಿಂಟಾಲ್ ನೆಲಗಡಲೆ ವಿತರಿಸಲಾಗಿದೆ. ಆದರೆ ಕೆಲ ರೈತರು 20 ದಿನದ ಹಿಂದೆ ಬಿತ್ತನೆ ಮಾಡಿದ್ದರೆ, ಬಹುತೇಕ ರೈತರು ಜಮೀನನ್ನು ಹದಗೊಳಿಸಿದ್ದು, ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದಾರೆ. ಆದರೆ ಮಳೆರಾಯ ಕೃಪೆ ತೋರುವನೇ ಎಂಬುದನ್ನು ಕಾದು ನೋಡಬೇಕಿದೆ.
ಅಂತರ್ಜಲ ಕುಸಿತ: ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲದ ಪರಿಣಾಮ ಜಲಾಶಯಗಳಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಇತ್ತ ಈಗಾಗಲೇ ಬಹುತೇಕ ಕೆರೆಕಟ್ಟೆ ಹಾಗೂ ಚೆಕ್‌ಡ್ಯಾಂಗಳಲ್ಲಿ ನೀರು ಬತ್ತಿಹೋಗಿದೆ. ಹಳ್ಳಕೊಳ್ಳಗಳಲ್ಲಿ ನೀರಿಲ್ಲದಾಗಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದಲ್ಲಿ ತಾಲೂಕಿನಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಮೂರು ಎಕರೆಗೆ 30 ಸಾವಿರ ರೂ. ಖರ್ಚು ಮಾಡಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದ್ದು, 22 ದಿನ ಕಳೆದಿವೆ. ಆದರೆ ಮಳೆಯಿಲ್ಲದ ಪರಿಣಾಮ ಪೈರುಗಳು ಒಣಗುತ್ತಿವೆ. ಈ ವಾರದಲ್ಲಿ ಮಳೆಯಾಗದಿದ್ದಲ್ಲಿ ಸಂಪೂರ್ಣ ನೆಲಕಚ್ಚುವ ಸಾಧ್ಯತೆ ಇದೆ. ಇದರಿಂದ ಆತಂಕ ಮನೆ ಮಾಡಿದ್ದು, ದಿಕ್ಕು ತೋಚದಂತಾಗಿದೆ.
ರೇಣುಕಾರಾಧ್ಯ, ಮಂಗಲ ಗ್ರಾಮದ ಯುವ ರೈತ
ಶಾಗ್ಯ ಭಾಗದಲ್ಲಿ ಹೆಚ್ಚಾಗಿ ಕಡಲೆಕಾಯಿಯನ್ನು ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಮಳೆಯಾಗದ ಪರಿಣಾಮ ಜಮೀನನ್ನು ಉಳುಮೆ ಮಾಡಿಸಿ ಹಾಗೆಯೇ ಬಿಡಲಾಗಿದೆ. ಹಾಗಾಗಿ ರೈತರು ಬಿತ್ತನೆಗಾಗಿ ಮಳೆಯನ್ನೇ ಕಾದು ಕುಳಿತಿದ್ದಾರೆ.
ಮಲ್ಲೇಶ್, ಶಾಗ್ಯ ಗ್ರಾಮಸ್ಥ
ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ 43.60ರಷ್ಟು ಮಳೆಯಾಗಬೇಕಿತ್ತು. ಆದರೆ 26.01ರಷ್ಟು ಮಾತ್ರ ಮಳೆಯಾಗಿದೆ. ಇದರಿಂದ ಬಹುತೇಕ ರೈತರು ಬಿತ್ತನೆಗಾಗಿ ಕಾದು ಕುಳಿತಿದ್ದಾರೆ. ಇನ್ನು ಈಗಾಗಲೇ ಬಿತ್ತನೆ ಮಾಡಿ ಬಂದಿರುವ ಪೈರುಗಳಿಗೆ ಈ ವಾರದಲ್ಲಿ ಮಳೆ ಅಗತ್ಯವಾಗಿದೆ.
ರಘುವೀರ್, ಕೃಷಿ ಅಧಿಕಾರಿ ಹನೂರು