ಮಳೆಯಿಂದಾಗಿ ಮನೆಗಳಿಗೆ ಹಾನಿ

21may-hdl--01
Published on

ಹೂವಿನಹಡಗಲಿ: ತಾಲೂಕಿನಲ್ಲಿ ಮಂಗಳವಾರ ಹಾಗೂ ಬುಧವಾರ ಸುರಿದ ಮಳೆಯಿಂದಾಗಿ ನಾಲ್ಕು ಮನೆಗಳು ಭಾಗಶಃ ಹಾನಿಗೀಡಾಗಿವೆ.

ಲಿಂಗನಾಯಕನಹಳ್ಳಿ ತಾಂಡಾದ ನಿಂಗಾನಾಯ್ಕ, ಕಾಲ್ವಿಯ ನಿಂಗಪ್ಪ ಅವರ ಮನೆ, ಪಟ್ಟಣದ ಕೋಟೆ ಪ್ರದೇಶದಲ್ಲಿ ಒಂದು ಮನೆ ಸೇರಿದಂತೆ ಒಟ್ಟು ನಾಲ್ಕು ಮನೆಗಳು ಮಳೆಯಿಂದ ಹಾನೀಡಾಗಿವೆ. ಬೀದಿ ಬದಿ ವ್ಯಾಪಾರಿಗಳು ಸಾಮಗ್ರಿಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು.

ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ ಹೋಗುತ್ತಿರುವುದು ಕಂಡುಬಂತು. ಪಟ್ಟಣದ ಹಳೆಯ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾದು ನಿಂತಿದ್ದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಹತ್ತಿರದ ಅಂಗಡಿಗಳನ್ನು ಆಶ್ರಯಿಸಿದರು. ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ನಿರಂತರ ಸುರಿದ ಮಳೆಯಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.

ಸತತ ಮಳೆಯಿಂದಾಗಿ ಹಳ್ಳಗಳು ತುಂಬಿಹರಿದವು. ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಇದರಿಂದಾಗಿ ಸಾರ್ವಜನಿಕರು ರಾತ್ರಿಯಲ್ಲ ನಿದ್ದೆ ಇಲ್ಲದೆ ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net